ಮಂಗಳೂರು: ನಗರದ ಬೈಕಂಪಾಡಿ ಮೀನಕಳಿಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ರೌಡಿ ಶೀಟರ್ ರಾಜ ಯಾನೆ ರಾಘವೇಂದ್ರ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ನವೀನ ಯಾನೆ ಮೈಕಲ್ ನವೀನ ಯಾನೆ ನವೀನ ಬೈಕಂಪಾಡಿ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜ ಯಾನೆ ರಾಘವೇಂದ್ರ ಎಂಬಾತನ ಕೊಲೆ ಪ್ರಕರಣದಲ್ಲಿ ಕೊಲೆಯ ಸಂಚನ್ನು ರೂಪಿಸಿದ್ದ, ಕೊಲೆ ಪ್ರಕರಣದ ರೂವಾರಿ, ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಮೇಲೆ ಮೂರು ಕೊಲೆ ಪ್ರಕರಣಗಳು ಸೇರಿದಂತೆ, ಒಟ್ಟು 8 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು ನಗರದ ಬೈಕಂಪಾಡಿ ಮೀನಕಳಿಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ರೌಡಿ ಶೀಟರ್ ರಾಜ ಯಾನೆ ರಾಘವೇಂದ್ರ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ಪತ್ನಿಯ ಹುಟ್ಟುಹಬ್ಬದ ಸಂಭ್ರಮವನ್ನು ಮುಗಿಸಿ ಬೇಕರಿಗೆ ತಿಂಡಿ ಕೊಂಡು ಹೋಗಲೆಂದು ಬಂದಿದ್ದ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಬೀಸಿ ರಾಘವೇಂದ್ರನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.
ಇನ್ನು ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದೆ.