IMA ವಂಚನೆ ಪ್ರಕರಣ: ಮೂರು ದಿನ ಸಿಬಿಐ ಪೊಲೀಸರ ವಶಕ್ಕೆ ಮಾಜಿ ಸಚಿವ ರೋಷನ್ ಬೇಗ್..!
ಬೆಂಗಳೂರು : ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಮೂರು ದಿನಗಳ ಕಾಲ ಸಿಬಿಐ ಪೊಲೀಸರ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ನ್ಯಾಯಾಂಗ ವಶದಲ್ಲಿದ್ದ ರೋಷನ್ ಬೇಗ್ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನೆಪವನ್ನು ಅವರು ನೀಡಿದ್ದರು.
ಇತ್ತ ಬಹುಕೋಟಿ ವಂಚನೆಯಲ್ಲಿ ಮಾಜಿ ಸಚಿವರ ಪಾತ್ರ ಇರುವ ಹಿನ್ನಲೆ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ಸಿಬಿಐ ಮನವಿ ಸಲ್ಲಿಕೆ ಮಾಡಿತ್ತು.
ಅಲ್ಲದೇ ಪ್ರಕರಣದ ಕುರಿತ ಹೆಚ್ಚಿನ ವಿಚಾರಣೆಗೆ ಅವರನ್ನು ವಶಕ್ಕೆ ನೀಡುವಂತೆ ಮನವಿಯನ್ನು ಸಿಬಿಐ ಸಲ್ಲಿಸಿತ್ತು. ಈ ಕುರಿತು ಅರ್ಜಿ ಪರಿಸಶೀಲಿಸಿದ ಸಿಬಿಐ ನ್ಯಾಯಾಲಯ ಈ ಆದೇಶ ನೀಡಿದೆ.
ನ. 28ರಿಂದ ಬೇಗ್ ಅವರನ್ನು ಮೂರು ದಿನಗಳ ಸಿಬಿಐ ವಶಕ್ಕೆ ಪಡೆಯಲಿದ್ದು, ವಿಚಾರಣೆ ನಡೆಸಲಿದೆ.ಪ್ರಕರಣ ಸಂಬಂಧ ಭಾನುವಾರ ಸಿಬಿಐ ರೋಷನ್ ಬೇಗ್ ಅವರನ್ನು ಬಂಧಿಸಿತ್ತು. ಈ ವೇಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿತ್ತು.
120B, r/w 420, 406, 405 ಮತ್ತು 128 ಸೆಕ್ಷನ್ ಅಡಿಯಲ್ಲಿ ರೋಷನ್ ಬೇಗ್ ಮೇಲೆ ಕೇಸ್ ದಾಖಲು ಮಾಡಲಾಗಿದೆ. ರೋಷನ್ ಬೇಗ್ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಇನ್ನು ನಿನ್ನೆ ಪರಪ್ಪನ ಅಗ್ರಹಾರದಲ್ಲಿ ಕ್ವಾರಂಟೈನ್ ಸಿಂಗಲ್ ಸೆಲ್ನಲ್ಲಿದ್ದ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಕ್ಸಿಜನ್ ಬೆಡ್ಗೆ ಶಿಫ್ಟ್ ಮಾಡಲಾಗಿದೆ.
ಇಂದು ಮುಂಜಾನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಅವರನ್ನು ಜೈಲು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಕ್ಕರೆ ಕಾಯಿಲೆ, ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ.
ಈ ನಡುವೆ ನಿನ್ನೆ ಪ್ರಕರಣದ ಸಂಬಂಧ ಸಿಬಿಐ ರೋಷನ್ ಬೇಗ್ ಅವರ ಕುಟುಂಬಸ್ಥರ ಮನೆ ಮೇಲೆ ದಾಳಿ ನಡೆಸಿದ್ದು, ಪ್ರಕರಣದ ಕುರಿತು ಸಾಕ್ಷ್ಯ ಹುಡುಕಾಟ ನಡೆಸಿತ್ತು.
ಐಎಂಎ ಬಹುಕೋಟಿ ಪ್ರಕರಣದಲ್ಲಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ನಿಂದ ರೋಷನ್ ಬೇಗ್ ಸುಮಾರು 200 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ.
ಇದರ ಜೊತೆಗೆ ಐಷಾರಾಮಿ ಉಡುಗೊರೆಯನ್ನು ಅವರು ಪಡೆದಿದ್ದಾರೆ ಎಂಬ ಆರೋಪ ದಾಖಲಾಗಿದೆ.
ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರೋಷನ್ ಬೇಗ್ ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಮುಂದಾಗಲು ತಯಾರಿ ನಡೆಸಿದ್ದರು. ಬೇಗ್ ಸಿಬಿಐನಿಂದ ತಪ್ಪಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.