ಕಳವುಗೈದ ಸೊತ್ತೇ ಕಳ್ಳನಿಗೆ ಮುಳುವಾಯಿತು;ಉಡುಪಿಯಲ್ಲಿ ಒಣಮೀನು ಕಳ್ಳನ ಬಂಧನ..!
ಉಡುಪಿ:ಸಣ್ಣ ಕಾಗದದ ತುಂಡಿನಿಂದಲೂ ದೊಡ್ಡ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾನೆ ಅನ್ನೋದಿಕ್ಕೆ ಒಣ ಮೀನು ಕಳ್ಳತನವಾಗಿ, ಕಳ್ಳ ಅಜ್ಜಿಯರ ಕೈಗೆ ಸಿಕ್ಕಿಹಾಕಿ ಕೊಂಡದ್ದೇ ಕುತೂಹಲಕಾರಿ ಘಟನೆ. ಕದ್ದ ವಸ್ತು ಇದ್ದಲ್ಲಿಗೆ ಬಂದು, ಕಳ್ಳ ತಗಲ್ಹಾಕಿಕೊಂಡದ್ದು ಹೇಗೆ ಅನ್ನೋದನ್ನ ನೋಡಿ.ಕರಾವಳಿಯ ಸುಡು ಬಿಸಿಲಿನಲ್ಲಿ ಮೀನು ಒಣ ಹಾಕುತ್ತಿರುವ ಅಜ್ಜಿಯರಿಗೆ, ಮೀನು ಮಾರಾಟವೇ ಜೀವಾಳ.. ವಯಸ್ಸಾದಂತೆ ಮೀನುಗಾರ ಮಹಿಳೆಯರು, ಹಸಿ ಮೀನು ಮಾರಾಟ ಮಾಡುವ ವೃತ್ತಿಯನ್ನು ಸ್ವಲ್ಪ ಕಮ್ಮಿ ಮಾಡಿ, ಹಸಿ ಮೀನು ಒಣಗಿಸಿ ಮಾರಾಟ ಮಾಡುತ್ತಾರೆ..
ಉಡುಪಿಯ ಮಲ್ಪೆ ಬಂದರಿನ ಬಳಿ ಹಸಿ ಮೀನು, ಒಣಗಿಸಿ ಮಾರಾಟ ಮಾಡಿ ಅದರಿಂದಲೇ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ.. ಆದ್ರೆ ಇತ್ತೀಚಿನ ಕೆಲ ತಿಂಗಳಿನಿಂದ ಮೀನು ಒಣಗಿಸಿ, ಚೀಲಗಳಲ್ಲಿ ಕಟ್ಟಿ ಗೂಡುಗಳಲ್ಲಿ ಇಟ್ಟಿದ್ದ ಮೀನುಗಳು ಕಾಣಿಯಾಗುತ್ತಿತ್ತು. ಟನ್ ಗಟ್ಟಲೇ ಮೀನು ಕಳ್ಳತನವಾಗುತ್ತಿತ್ತು.. ಇದರ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ರೂ ಕಳ್ಳ ಮಾತ್ರ ಸಿಕ್ಕಿರಲಿಲ್ಲ
ಆದ್ರೀಗ ಕಳ್ಳ ತಗಲ್ಹಾಕಿಕೊಂಡಿದ್ದಾನೆ. ತಮಿಳುನಾಡು ಮೂಲದ ರಮನಾಥನೇ ಈ ಅಜ್ಜಿಯಂದಿರು ಮಾರಾಟ ಮಾಡಲು ಒಣಗಿಸಿದ್ದ ಮೀನು ಕದ್ದವನು.
ಹೇಗೆ ಸಿಕ್ಹಾಕಿಕೊಂಡ ಎನ್ನುವುದೇ ಇಂಟ್ರೆಸ್ಟಿಂಗ್.. ಇದೇ ಮೀನು ಒಣಗಿಸುವ ಸ್ಥಳಕ್ಕೆ ಒಬ್ಬ ಯುವಕ ರಿಕ್ಷಾದಲ್ಲಿ ಬಂದು ಈ ಮಹಿಳೆಯರ ಬಳಿ ನನ್ನಲ್ಲಿ ಒಣ ಮೀನು ಇದೆ..ನನಗೆ ಹಣ ನೀಡಿ, ನೀವ್ ಮಾರಾಟ ಮಾಡುವಾಗ ಇದನ್ನು ಮಾರಾಟ ಮಾಡಿ ಎಂದು ಹೇಳಿದ್ದಾನೆ.
ಆಟೋದಲ್ಲಿ ಇದ್ದ ಮೀನಿನ ಗೋಣಿ ನೋಡುವಾಗಲೇ ಮಹಿಳೆಯರಿಗೆ ಇದು ನಮ್ಮದೇ ಗೋಣಿ ಚೀಲ ಎಂದು ಸಂಶಯ ಬಂದಿತ್ತು.. ಆದರೂ ಗೋಣಿ ಚೀಲ ಕಳಗೆ ಇರಿಸಿ ಕಟ್ಟಿದ ಹಗ್ಗ ಬಿಚ್ಚಿಸಿ ನೋಡಿದಾಗ ಅದರಲ್ಲಿ ಬರೆದು ಹಾಕಿದ ಕಾಗದ ಇತ್ತು..
ಇದೇ ಕಳ್ಳನನ್ನು ಹಿಡಿಯಲು ಸಾಕ್ಷಿ ಆಯ್ತು.. ಅದು ಹೇಗಪ್ಪ ಅಂದ್ರೆ, ಕಾಗದ ಈ ಮಹಿಳೆಯರು ಯಾರಿಗೆ ಮಾರಾಟ ಮಾಡಬೇಕು ಅವರ ಹೆಸರು ಬರೆದು ಗೋಣಿ ಚೀಲದ ಒಳಗೆ ಇಟ್ಟಿದ್ರೋ ಅದೇ ಕಾಗದವದು…ರಿಕ್ಷಾ ಚಾಲಕನಿಗೆ ಎರಡೇಟು ಬಿಗಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಕದ್ದದ್ದು ನಾನಲ್ಲ ನನಗೆ ತಮಿಳುನಾಡು ಮೂಲದ ರಮಾನಾಥ ಎಂಬುವನು ಕೊಟ್ಟದ್ದು ಎಂದಿದ್ದಾನೆ. ಬಳಿಕ, ರಮಾನಾಥನನ್ನು, ರಿಕ್ಷಾ ಚಾಲಕನಿಂದಲೇ ಎಣ್ಣೆ ಹಾಕುವ ಬಾ ಅಂತ ಸ್ಥಳಕ್ಕೆ ಉಪಾಯದಿಂದ ಕರೆಸಿ, ಹಿಡಿದು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ..
ನಾವು ನಂಬಿರುವ ಕಲ್ಕುಡ ಹಾಗೂ ಕೊರಗಜ್ಜ ದೈವಗಳಲ್ಲಿ ನಮ್ಮಿಂದ ಕದ್ದ ಒಣಮೀನು, ಕಳ್ಳತನ ಮಾಡಿದ ಜಾಗಕ್ಕೆ ಬರಬೇಕು ಎಂದು ಹರಕೆ ಹೊತ್ತಿದ್ದೆ ಎನ್ನುತ್ತಾರೆ ಮೀನುಗಾರ ಮಹಿಳೆಯೋರ್ವರು…
ಮಾರುಕಟ್ಟೆಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದೇ ಕಳವಿಗೆ ಕಾರಣ ಎಂದಿದ್ದಾರೆ ಮಹಿಳೆಯರು.. ಹೈಮಾಸ್ಟ್ ಕೆಟ್ಟು ಹೋಗಿ ವರ್ಷವಾದ್ರೂ ಇನ್ನೂ ಸರಿಪಡಿಸಿಲ್ಲ, ಅಲ್ಲದೇ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಜನಪ್ರತಿನಿಧಿಗಳನ್ನು ಕೇಳಿದ್ರೂ ಸ್ಪಂದನೆಯಿಲ್ಲ ಇದು ಕಳ್ಳರಿಗೆ ವರದಾನವಾಗಿದೆ ಎನ್ನುವ ಆರೋಪವಿದೆ..
ಒಟ್ಟಿನಲ್ಲಿ, ಅಜ್ಜಿಯಂದಿರು ಕಷ್ಟ ಪಟ್ಟು ಬೆವರು ಸುರಿಸಿ, ಕೂಡಿಟ್ಟ ಒಣ ಮೀನನ್ನು ಕದಿಯುತ್ತಿದ್ದ ಖದೀಮ ಸಿಕ್ಕಿಬಿದ್ದು ಪೊಲೀಸ್ ವಶದಲ್ಲಿ ಇದ್ದಾನೆ.. ಮಹಿಳೆಯರಿಗೂ ಒಣ ಮೀನು ಮತ್ತೆ ಸಿಕ್ಕ ಖುಷಿ ಇದೆ.