ಮಂಗಳೂರು: ನಗರ ಹೊರವಲಯದ ಶಕ್ತಿನಗರದ ಮುನ್ಸೂಡಿ ಬ್ರಹ್ಮಲಿಂಗೇಶ್ವರ ದೈವಸ್ಥಾನದಲ್ಲಿ ನಡೆದ ಕಳವು ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಆಟೋ ಚಾಲಕ ಪ್ರೇಮ್ ಎಂಬವರು ಪ್ರಮುಖ ಪಾತ್ರ ವಹಿಸಿದ್ದಾರೆ.
ದೈವಸ್ಥಾನದಿಂದ ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗಿನ ಅವಧಿಯಲ್ಲಿ 50 ಸಾವಿರ ರೂ. ಮೌಲ್ಯದ ಸಾಮಗ್ರಿ ಕಳವಾಗಿತ್ತು.
ತಕ್ಷಣವೇ ವಿಷಯ ತಿಳಿದು ಕಂಕನಾಡಿ ನಗರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಇದೇ ವೇಳೆ ಬೆಳಗ್ಗಿನ ಜಾವ ಬಾಡಿಗೆಗೆ ಬಂದಿದ್ದ ಪ್ರೇಮ್ ಅವರಿಗೆ ಈ ಆರೋಪಿ ಸಿಕ್ಕಿದ್ದು, ಕಾವೂರಿಗೆ ಬಿಡಲು ಬಾಡಿಗೆ ಎಷ್ಟಾಗುತ್ತದೆ ಎಂದು ವಿಚಾರಿಸಿದ್ದ.
ಬಳಿಕ ರಿಕ್ಷಾದಲ್ಲಿ ಗೋಣಿಯ ಕಟ್ಟೊಂದನ್ನು ಕೊಂಡೊಯ್ಯುವ ಬಗ್ಗೆಯೂ ವಿಚಾರಿಸಿದ್ದು, ಬಾಡಿಗೆ 120 ರೂ. ಇಲ್ಲದ ಕಾರಣ ನಂತೂರಿಗೆ ಬಿಡಲು ಆಟೊ ಚಾಲಕನಿಗೆ ಹೇಳಿದ್ದ.
ಆದರೆ ಪಚ್ಚನಾಡಿ ಬಳಿಯ ಬಂದಲೆ ಕ್ರಾಸ್‌ನಲ್ಲಿ ಇಳಿದು ರಿಕ್ಷಾ ಚಾಲಕನಿಗೆ ಚಿಲ್ಲರೆ ಹಣ ನೀಡಿ ತೆರಳಿದ್ದಾನೆ ಎನ್ನಲಾಗಿದೆ.
ನಂತರ ಮುಂದಕ್ಕೆ ಪ್ರೇಮ್ ರಿಕ್ಷಾ ಚಲಾಯಿಸಿಕೊಂಡು ಬರುವಾಗ ಪೊಲೀಸರು ಸಿಕ್ಕಿದ್ದು, ಅವರಲ್ಲಿ ವಿಚಾರಿಸಿದಾಗ ದೈವಸ್ಥಾನದಿಂದ ಕಳವಾಗಿರುವ ವಿಚಾರ ಗಮನಕ್ಕೆ ಬಂದಿದೆ.
ಆಗ ತನ್ನ ರಿಕ್ಷಾದಲ್ಲಿ ಪ್ರಯಾಣಿಸಿ ಅರ್ಧದಲ್ಲಿ ಇಳಿದು ಹೋಗಿರುವವನ ಬಗ್ಗೆ ಶಂಕೆ ಉಂಟಾಗಿ ಪೊಲೀಸರನ್ನು ಕರೆದುಕೊಂಡು ಹಿಂದಿರುಗಿ ಬಂದ ರಸ್ತೆಯಲ್ಲೇ ಹೋಗುತ್ತಿದ್ದಾಗ, ಆರೋಪಿ ಪೊಲೀಸರನ್ನು ನೋಡಿ ಓಡಲು ಆರಂಭಿಸಿದ್ದಾನೆ ಆತನನ್ನು ಹಿಡಿದು ಠಾಣೆಗೆ ತಂದು ವಿಚಾರಣೆಗೊಳಪಡಿಸಿದಾಗ ದೈವಸ್ಥಾನದಿಂದ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಆರೋಪಿ ಕಂಕನಾಡಿ ನಗರ ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ.