ಬಂಟ್ವಾಳ: ರಾತ್ರಿ ವೇಳೆ ಒಂಟಿಯಾಗಿ ಮನೆಯಲ್ಲಿದ್ದ ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಜೀವ ಬೆದರಿಕೆ ಹಾಕಿ ಚಿನ್ನ ದರೋಡೆ ಮಾಡಿರುವ ಘಟನೆ ಮಾ.26 ರ ಶನಿವಾರ ರಾತ್ರಿ ವೇಳೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಮಣಿನಾಲ್ಕೂರು ಗ್ರಾಮದ ಟಾಂದಲ್ಕೆ ನಿವಾಸಿ ಸೇಸಪ್ಪ ನಾಯ್ಕ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ಅಜ್ಜಿಯ ಕಿವಿಯಲ್ಲಿದ್ದ ಬೆಂಡೋಲೆ ಸಹಿತ ಗೋಡ್ರೆಜ್‌ನಲ್ಲಿ ಇರಿಸಲಾಗಿದ್ದ ಕರಿಮಣಿ ಸರ, ಹಾಗೂ ಉಂಗುರ ಸೇರಿ ಒಟ್ಟು 4.30 ಪವನ್ ಚಿನ್ನವನ್ನು ಕಳ್ಳರು ದರೋಡೆ ಮಾಡಿಕೊಂಡು ಹೋಗಿದ್ದಾರೆ.
ಸೇಸಪ್ಪ ನಾಯ್ಕ್ ಅವರ ಮನೆಯಲ್ಲಿ ತಾಯಿ ಮುತ್ತು ಹಾಗೂ ಪತ್ನಿ ಪ್ರೇಮಾ ಒಟ್ಟು ಮೂರು ಮಂದಿ ಮಾತ್ರ ವಾಸಿಸುತ್ತಿದ್ದರು.
ಶನಿವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ವೃದ್ಧೆ ತಾಯಿಯನ್ನು ಮನೆಯಲ್ಲಿ ನಿಲ್ಲಿಸಿ ಮನೆಗೆ ಬೀಗ ಹಾಕಿ ಅಲ್ಲಿಯೇ ಹತ್ತಿರದಲ್ಲೇ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವದ ಅಂಗವಾಗಿ ನಾಟಕ ಪ್ರದರ್ಶನ ನೋಡಲು ಹೋಗಿದ್ದರು.
ನಾಟಕ ಮುಗಿಸಿ 2.30 ವೇಳೆ ವಾಪಾಸು ಮನೆಗೆ ಬರುವಾಗ ಮನೆಯ ಬೀಗ ಮುರಿದು ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿ ಇದ್ದು, ಮನೆಯೊಳಗೆ ಹೋಗಿ ತಾಯಿಯನ್ನು ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಮನೆಯೊಳಗೆ ಬಂದು ಮಲಗಿದ್ದ ಮುತ್ತು ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಬೊಬ್ಬೆ ಹಾಕಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಚಿನ್ನವನ್ನು ದರೋಡೆ ಮಾಡಿರುವ ಪ್ರಕರಣದ ಬಗ್ಗೆ ತಿಳಿದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಹರೀಶ್, ಅಪರಾಧ ವಿಭಾಗದ ಎಸ್‌ಐ.ಸಂಜೀವ, ಬೆರಳಚ್ಚು ತಜ್ಞರು, ಶ್ವಾನ ದಳದವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದರೋಡೆ ಆರೋಪಿಗಾಗಿ ಶೋಧ ಕಾರ್ಯಮುಂದುವರಿದಿದ್ದು, ಶೀಘ್ರವಾಗಿ ಆರೋಪಿಯ ಬಂಧನ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.