ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿಯು ಹೊಸ ಟೆಂಡರ್ ಮೂಲಕ ವೇಗವಾಗಿ ನಡೆಯುತ್ತಿದ್ದು, 2023ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಜತೆಗೆ ಜಿಲ್ಲೆಯ ಇತರ ಹೆದ್ದಾರಿಗಳ ಅಭಿವೃದ್ಧಿಗೂ ವಿಶೇಷ ಗಮನಹರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಅವರು ಬಿ.ಸಿ.ರೋಡಿನಿಂದ ಕಲ್ಲಡ್ಕದವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ್ದು “ಈ ಕಾಮಗಾರಿಯಲ್ಲಿ ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿಯಲ್ಲಿ 2 ಸೇತುವೆಗಳು,
ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಗಾರಿ ಪ್ರಗತಿಯನ್ನು ಪ್ರತಿ 15 ದಿನಗಳಿಗೊಮ್ಮೆ ಸಭೆಯ ಮೂಲಕ ಪರಿಶೀಲಿಸಲಾಗುತ್ತದೆ.
ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಪ್ರಧಾನಿ ಮೋದಿ, ಹೆದ್ದಾರಿ ಸಚಿವ ನಿತಿನ್ ಘಡ್ಕರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಬಿಕರ್ನಕಟ್ಟೆಯಿಂದ ಸಾಣೂರುವರೆಗಿನ ಕಾಮಗಾರರಿಗೆ ಈಗಾಗಲೇ ಟೆಂಡರ್ ಆಗಿದ್ದು, ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆವರೆಗಿನ ಕಾಮಗಾರಿ ವೇಗವಾಗಿ ಸಾಗುತ್ತಿದೆ.
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
ಸಕಲೇಶಪುರ ಭಾಗದ ಹೆದ್ದಾರಿಗೂ ವಿಶೇಷ ಅನುದಾನಕ್ಕಾಗಿ ಘಡ್ಕರಿ ಅವರಿಗೆ ಮನವಿ ನೀಡಿದ್ದೇನೆ ಎಂದು ಹೇಳಿದರು.
ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡದೆ ಪರ್ಯಾಯ ಕ್ರಮದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು” ಎಂದರು.
ಸಚಿವ ಎಸ್.ಅಂಗಾರ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ,
ಪ್ರಮುಖರಾದ ಮೋನಪ್ಪ ದೇವಸ್ಯ, ಮಾಧವ ಮಾವೆ, ಚೆನ್ನಪ್ಪ ಆರ್.ಕೋಟ್ಯಾನ್, ವಜ್ರನಾಥ ಕಲ್ಲಡ್ಕ, ಪುಷ್ಪರಾಜ್ ಚೌಟ, ಯಶೋಧರ ಕರ್ಬೆಟ್ಟು, ಕೇಶವ ದೈಪಲ, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಅಭಿಷೇಕ್ ಶೆಟ್ಟಿ, ಕಮಲಾಕ್ಷಿ ಪೂಜಾರಿ ಕೆಎನ್‌ಆರ್ ಸಂಸ್ಥೆಯ ದೀಪಕ್‌ಕುಮಾರ್, ವಿಶೇಷ ಭೂಸ್ವಾಧಿನಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.