ಎಚ್ಚೆತ್ತುಕೊಂಡ ಹರೇಕಳ ಗ್ರಾಮಸ್ಥರು: ಗ್ರಾಮಕ್ಕೆ ಬರುವ ರಸ್ತೆಯನ್ನೇ ಬಂದ್ ಮಾಡಿದ್ರು.!
ಮಂಗಳೂರು: ದಿನೇದಿನೇ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಬೆಳಗ್ಗೆ ಎದ್ದ ತಕ್ಷಣ ಒಂದು ಪಾಸಿಟಿವ್, ಒಂದು ಸಾವು ಅನ್ನೋ ಸುದ್ದಿಗಳು ನಮ್ಮ ಕಿವಿಗೆ ಅಪ್ಪಳಿಸುತ್ತಲೇ ಇರುತ್ತದೆ.
ಹಾಗಾಗಿ ಹೆಚ್ಚು ಹರಡದಂತೆ ಇಡೀ ದೇಶಕ್ಕೆ ದಿಗ್ಭಂಧನ ಹಾಕಲಾಗಿದೆ. ಇತ್ತ ದ.ಕ. ಜಿಲ್ಲೆ ಲಾಕ್ ಡೌನ್ ಮಾಡಲಾಗಿದ್ದರೂ ಕೆಲವೊಂದು ಗ್ರಾಮಾಂತರ ಪ್ರದೇಶದಲ್ಲಿ ಜನ ಕ್ಯಾರೆ ಅನ್ನದೇ ಓಡಾಟ ಮಾಡುತ್ತಿದ್ದಾರೆ.
ಈಗಾಗ್ಲೆ ಬಂಟ್ವಾಳದ ಸಜೀಪ ಗ್ರಾಮಕ್ಕೆ ಕೊರೊನಾ ಕಾಲಿಟ್ಟಿದ್ದು, 10 ತಿಂಗಳ ಮುದ್ದು ಮಗುವಿಗೆ ಕೊರೊನಾ ಕಾಡಿದೆ.
ಈ ಹಿನ್ನಲೆಯಲ್ಲಿ ಸದ್ಯ ಗ್ರಾಮೀಣ ಪ್ರದೇಶದಲ್ಲೂ ಜನ ಎಚ್ಚರಗೊಂಡಿದ್ದು, ಹರೇಕಳ ಗ್ರಾಮದ ಆಲಡ್ಕದಲ್ಲಿ ಸ್ಥಳೀಯರೇ ಒಟ್ಟು ಸೇರಿ ಹೊರಗಿನವರ ವಾಹನ ಸಂಚಾರವನ್ನು ತಡೆಯಲು ರಸ್ತೆಯನ್ನು ಬಂದ್ ಮಾಡುವ ಮೂಲಕ ಕೊರೋನ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಹರೇಕಳ ಗ್ರಾಮದ ಆಲಡ್ಕ ಪ್ರದೇಶದಲ್ಲಿ ಸುಮಾರು 200ರಷ್ಟು ಮನೆಯಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೊಳಿಸಲಾಗಿದ್ದರೂ ಗ್ರಾಮೀಣ ಪ್ರದೇಶವಾದ ಹರೇಕಳದಲ್ಲಿ ಜನರ ಓಡಾಟ ನಿರಂತರವಾಗಿತ್ತು.
ಅಲ್ಲದೆ ಹರೇಕಳ ಮಾತ್ರವಲ್ಲದೆ ಹೊರಗಿನ ಗ್ರಾಮದ ಯುವಕರು ಕೂಡಾ ಇಲ್ಲಿಗೆ ವಾಹನದ ಮೂಲಕ ಬರುತ್ತಿದ್ದು ಇದು ಇಲ್ಲಿಯ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.
ಇದೀಗ ಹೊರಗಿನವರು ಇಲ್ಲಿ ಬಂದು ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಹರೇಕಳ ಆಲಡ್ಕದ ಗ್ರಾಮಸ್ಥರು ಮುನ್ನೆಚ್ಚರಿಕಾ ಕ್ರಮ ವಹಿಸಿಕೊಂಡು ಆಲಡ್ಕಕ್ಕೆ ಪ್ರವೇಶಿಸುವ ರಸ್ತೆಯನ್ನು ಬಂದ್ ಮಾಡಿದ್ದಾರೆ.
ಸದ್ಯ ಹೊರಗಿನ ವಾಹನಕ್ಕೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದ್ದು, ಆಲಡ್ಕ ಗ್ರಾಮದ ಅಗತ್ಯ ವಾಹನಗಳಿಗಷ್ಟೇ ಇಲ್ಲಿ ಪ್ರವೇಶವನ್ನು ನೀಡಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೇರಳ ಗಡಿ ರಸ್ತೆಯನ್ನು ಮುಡಿಪು, ಬಾಳೆಪುಣಿ, ನರಿಂಗಾನ ಪ್ರದೇಶದಲ್ಲಿ ಪೊಲೀಸರು ಬಂದ್ ಗೊಳಿಸಿದ್ದರು.
ಇದೀಗ ಹರೇಕಳ ಪರಿಸರದಲ್ಲಿ ಗ್ರಾಮಸ್ಥರು ಕೂಡಾ ಎಚ್ಚೆತ್ತುಕೊಂಡು ಹೊರಗಿನಿಂದ ಬರುವವರನ್ನು ತಡೆಯುವ ಉದ್ದೇಶದಿಂದ ರಸ್ತೆ ಬಂದ್ ಗೊಳಿಸುವ ಮೂಲಕ ಜಾಗೃತರಾಗಿದ್ದಾರೆ.