ಸ್ಯಾನ್‌ಫ್ರಾನ್ಸಿಸ್ಕೋ: ಎಲಾನ್‌ಮಸ್ಕ್ ಮಾಲೀಕತ್ವದ ಟ್ವಿಟರ್ ಕಂಪೆನಿಯಲ್ಲಿ ಇದೀಗ ನೂರಾರು ಟ್ವಿಟ್ಟರ್ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದು ಈ ಹಿನ್ನೆಲೆ ಕಂಪೆನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಅಲ್ಲದೆ ಟ್ವಿಟ್ಟರ್ನಲ್ಲಿ #GoodByeTwitter, #RIPTwitter, #TwitterDown ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿದೆ. ಲಭ್ಯವಿರುವ ಮೂಲಗಳ ವರದಿಗಳ ಪ್ರಕಾರ, ಟ್ವಿಟ್ಟರ್ ಉದ್ಯೋಗಿಗಳಿಗೆ ಕಂಪನಿಯಲ್ಲಿ ಉಳಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ಸಮಯಾವಕಾಶ ನೀಡಲಾಗಿತ್ತು. ಆದರೆ, ಉದ್ಯೋಗಿಗಳು ಸೆಲ್ಯೂಟ್ ಎಮೋಜಿಗಳನ್ನು ಕಳುಹಿಸಿ ವಿದಾಯ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಟ್ವಿಟ್ಟರ್ನ ಎಲ್ಲಾ ಕಚೇರಿಗಳು ತಾತ್ಕಾಲಿಕವಾಗಿ ಬಂದ್ ಅಗಿರುವುದು ತಿಳಿದುಬಂದಿದೆ. ಉದ್ಯೋಗಿಗಳ ಪ್ರತಿಕ್ರಿಯೆಯ ಆಧಾರದಲ್ಲಿ ಉದ್ಯೋಗಿಗಳಿಗೆ ಮೇಲ್ ಕಳುಹಿಸಿದ ಟ್ವಿಟರ್ ಮ್ಯಾನೇಜ್‌ಮೆಂಟ್ “ಕೂಡಲೇ ಜಾರಿಯಾಗುವಂತೆ ಕಚೇರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಎಲ್ಲಾ ಬ್ಯಾಡ್ಜ್ ಅಕ್ಸೆಸ್ ಅನ್ನು ರದ್ದು ಮಾಡಲಾಗಿದೆ.
ನವೆಂಬರ್ 21, ಸೋಮವಾರ ಕಚೇರಿಗಳು ಮತ್ತೆ ಬಾಗಿಲು ತೆರೆಯುತ್ತವೆ. ನಿಮ್ಮ ಹೊಂದಾಣಿಕೆಗೆ ನಮ್ಮ ಧನ್ಯವಾದ. ಕಂಪನಿಯ ಗೌಪ್ಯ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಾಗಲೀ, ಮಾಧ್ಯಮದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ಚರ್ಚಿಸದೆ ಕಂಪನಿಯ ನೀತಿಗೆ ಬದ್ಧತೆಯನ್ನು ಮುಂದುವರಿಸಿರಿ,” ಎಂದು ತಿಳಿಸಿದೆ.
ಎಲಾನ್ ಮಸ್ಕ್ ಟ್ವಿಟರ್‌ನನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅನೇಕ ಬದಲಾವಣೆಗಳಾಗಿವೆ. ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಎರಡು ಆಯ್ಕೆಯನ್ನು ಮಸ್ಕ್ ನೀಡಿದ್ದರು ಎನ್ನಲಾಗಿದೆ.
ಈ ನಿಯಮವನ್ನು ಖಂಡಿಸಿದ ಉದ್ಯೋಗಿಗಳು ಇದೀಗ ರಾಜೀನಾಮೆಯನ್ನು ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಮಸ್ಕ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದೀಗ ಸುಮಾರು 3,000 ಉದ್ಯೋಗಿಗಳು ಟ್ವಿಟ್ಟರ್ ತೊರೆದಿದ್ದಾರೆ.