ಮಂಗಳೂರು : ಮುಂಬಯಿನ ಪ್ರತಿಷ್ಠಿತ ಪಯ್ಯಡೆ ಗ್ರೂಪ್ ಆಫ್ ಹೋಟೆಲ್ಸ್ ನ ಪಾಲುದಾರ, ಬಂಟ್ವಾಳದ ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಕೂರಿಯಾಳಗುತ್ತು ಪಯ್ಯಡೆ ಹೌಸ್ ಅವರು ಇಂದು(ಆ.20) ನಿಧ*ನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ರಘುನಾಥ ಪಯ್ಯಡೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಹಿರಿಯ ಸಹೋದರ ಕೇಶವ ಪಯ್ಯಡೆ, ನಾಲ್ಕು ಸಹೋದರರು, ಸಹೋದರಿಯನ್ನು, ಮುಂಬೈ ಹೊಟೇಲ್ ಉದ್ಯಮಿಗಳನ್ನು ಅಗಲಿದ್ದಾರೆ.
ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ದೊಡ್ಡ ಮಟ್ಟಿನ ಕೊಡುಗೈದಾನಿಯಾಗಿ ಗುರುತಿಸಿಕೊಂಡಿದ್ದರು. ಅಮ್ಟಾಡಿ ಮಂಡಲ ಪಂಚಾಯತ್ ಪ್ರಧಾನರಾಗಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಬಂಟವಾಳದ ಬಂಟರ ಭವನ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಪ್ರಸ್ತುತ ಬಂಟರ ಸಂಘ ಬೆಳ್ಳೂರು ವಲಯದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ : ಉಡುಪಿ : ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿಯ ಶ*ವ ಬಾವಿಯಲ್ಲಿ ಪತ್ತೆ
ಸಂತಾಪ :
ರಘುನಾಥ ಪಯ್ಯಡೆ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಸ್ಕ್ಯಾಡ್ಸ್ ನ ಅಧ್ಯಕ್ಷ ರವೀಂದ್ರ ಕಂಬಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಆ. 21ರಂದು ಬೆಳಗ್ಗೆ 10ಕ್ಕೆ ಕೂರಿಯಾಳಗುತ್ತು ಪಯ್ಯಡೆ ಹೌಸ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.