ಮಂಗಳೂರು: ಕಾರಿನ ನಂಬರ್ ಪ್ಲೇಟ್ ಬಳಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಪೊಲೀಸ್ ಸಿಬ್ಬಂದಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಬಳಿ ಇಂದು ನಡೆದಿದೆ.
ಇಂದು ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮಾರುತಿ 800 ವಾಹನದಲ್ಲಿ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು.
ಆ ಭಾವಚಿತ್ರ ತೆಗೆಯುವಂತೆ ಪೊಲೀಸ್ ಸಿಬ್ಬಂದಿ ಸೂಚಿಸಿದ್ದು, ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಜೊತೆಗೆ ಸ್ಥಳದಲ್ಲಿದ್ದ ಕುಪಿತಗೊಂಡ ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ಚದುರಿಸಿದರು.
ಜೊತೆಗೆ ಸರಿಯಾದ ದಾಖಲೆ ಇಲ್ಲದ ಕಾರಣ ಪೊಲೀಸರು ಕಾರನ್ನು ವಶಪಡಿಕೊಂಡಿದ್ದು, ಕಾರನ್ನು ಠಾಣೆಗೆ ಕರೆದೊಯ್ದಿದ್ದಾರೆ.