ಅರಬ್ಬೀ ಸ್ಥಾನದಲ್ಲಿ ಪಸರಿಸಿದ ತುಳು ಪರ್ಬದ ಕಂಪು; ವರ್ಚುವಲ್ ಮಾಧ್ಯಮದಲ್ಲಿ ಲಕ್ಷಾಂತರ ಜನರ ವೀಕ್ಷಣೆ..!
ಕುವೈಟ್ :ಬರೋಬ್ಬರಿ 21 ವರ್ಷಗಳಿಂದ ತುಳುನಾಡಿನ ಕಂಪನ್ನು ಅರಬ್ಬೀಸ್ತಾನದಲ್ಲಿ ಪಸರಿಸುತ್ತಿರುವ ಹೆಮ್ಮೆಯ ಸಂಘ ತುಳುಕೂಟ ಕುವೈಟ್. ಈ ತುಳು ಕೂಟ ಕುವೈಟ್ ನ ಹೆಸರಾಂತ ತುಳುಪರ್ಬ ಕಾರ್ಯಕ್ರಮ ಶುಕ್ರವಾರ ಅದ್ಧೂರಿಯಿಂದ ನೆರವೇರಿದೆ.ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಈ ಬಾರಿ ಕಾರ್ಯಕ್ರಮ ವರ್ಚ್ಯುವಲ್ ಮಾಧ್ಯಮದಲ್ಲಿ ನಡೆದು ಲಕ್ಷಾಂತರ ಜನರ ವೀಕ್ಷಣೆ, ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಹೊರದೇಶದಲ್ಲಿದ್ದರೂ ಕೂಡ ಸದಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಹೆಸರುವಾಸಿ ತುಳು ಕೂಟ ಕುವೈಟ್. ಅದೇ ರೀತಿ ಸರ್ವಧರ್ಮದ ಬಂಧುಗಳನ್ನ ಒಟ್ಟು ಸೇರಿಸಿ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿಯೂ ಈ ಸಂಘದ ಕಾರ್ಯ ಪ್ರಶಂಸನೀಯ. ವರ್ಷಂ ಪ್ರತಿ ತುಳು ಪರ್ಬ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರ್ತಾ ಇದೆ. ಈ ಬಾರಿಯೂ ಈ ಅರ್ಥಪೂರ್ಣ ಕಾರ್ಯಕ್ರಮ ಶುಕ್ರವಾರದಂದು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಅದೇ ರೀತಿ ಕುವೈಟ್ ಕಾಲಮಾನ ಸಂಜೆ 4.30ಕ್ಕೆ ನೇರಪ್ರಸಾರಗೊಂಡ ಈ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರು ಪಧಾಧಿಕಾರಿಗಳು ದೀಪಬೆಳಗಿಸಿ ಚಾಲನೇ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಮಂಗಳೂರು ಬಿಷಪ್ ಡಾ | ಪೀಟರ್ ಪಾವ್ಲ್ ಸಲ್ಡಾನ , ಉಳ್ಳಾಲ ಸಯ್ಯದ್ ಮದಾನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಿತ ನುಡಿಗಳನ್ನು ನುಡಿದರು.
ಸಮಾರಂಭದಲ್ಲಿ ಮಾತನಾಡಿದ ತುಳುಕೂಟ ಕುವೈಟ್ ಅಧ್ಯಕ್ಷ ಕಾಪು ರಮೆಶ್ ಎಸ್ ಭಂಡಾರಿ ತುಳುಕೂಟ ಕುವೈಟ್ ಸರ್ವಧರ್ಮದ ಬಂಧುಗಳ ಕೂಡು ಕುಟುಂಬವಾಗಿದ್ದು, ಇಲ್ಲಿ ತುಳುನಾಡಿನ ನಾವುಗಳೆಲ್ಲರೂ ಅನ್ಯೋನ್ಯತೆಯಿಂದಿದ್ದೇವೆ . ಈ ಬಾರಿ ತುಳುಪರ್ಬ ವರ್ಚ್ಯುವಲ್ ಮಾಧ್ಯಮದಲ್ಲಿ ನಡೀತಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಸಂತಸ ತಂದಿದೆ ಎಂದರು.
ಮಜಾಭಾರತ ಖ್ಯಾತಿಯ ಮಸ್ಕಿರಿ ಕುಡ್ಲದಿಂದ ಜಬರದಸ್ತ್ ಕಾಮಿಡಿ, ಜಿಲ್ಲೆಯ ಪ್ರಸಿದ್ದ ಸಾಂಸ್ಕೃತಿಕ ಕಲಾ ತಂಡ ಮಕ್ಕಿಮನೆ ಕಲಾವೃಂದದಿಂದ ಸಂಗೀತ –ನೃತ್ಯ ಸೇರಿದಂತೆ ತುಳುನಾಡ ಹಾಸ್ಯ ದಿಗ್ಗಜರಾದ ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ದಿನೇಶ್ ಕೊಡಪದವು ಇವರಿಂದ ಕೇಚು ಕಲ್ಯಾಣಿ ಯಕ್ಷ-ಹಾಸ್ಯ-ರಸ ಕಾರ್ಯಕ್ರಮ ನಡೆಯಿತು.ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ವಿಲ್ಸನ್ ಧನ್ಯವಾದ ಸಮರ್ಪಿಸಿದರು. ಈ ಸಂಧರ್ಭ ಅಬ್ದುಲ್ ರಝಾಕ್, ಲಿಯೋನಲ್ ಮಾಸ್ಕರೇನಸ್, ಸನತ್ ಶೆಟ್ಟಿ ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.
ಈ ಬಾರಿ ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಈ ಕಾರ್ಯಕ್ರಮ ವರ್ಚುವಲ್ ಮಾಧ್ಯಮದಲ್ಲಿ ನಮ್ಮ ಕುಡ್ಲ ವಾಹಿನಿ ಟಿವಿ, ಯೂಟೂಬ್, ಫೆಸ್ ಬುಕ್ ನಲ್ಲಿ ನೇರ ಪ್ರಸಾರಗೊಂಡು ಲಕ್ಷಾಂತರ ಜನರ ವೀಕ್ಚಣೆಯ ಜೊತೆಗೆ ಈ ಕೋವಿಡ್ ಭಯದ ನಡುವೆಯೂ ತುಳುನಾಡಿನ ಕಂಪನ್ನು ಹೊರದೇಶದಲ್ಲಿ ಪಸರಿಸಿದ ಈ ವಿಭಿನ್ನ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.