ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ : ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಡಿಸಿ ಸೂಚನೆ..!
ಮಂಗಳೂರು : ರಾಜ್ಯದ ಕರಾವಳಿ ಪ್ರದೇಶದಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಗಾಳಿ-ಮಳೆ ಬೀಳುವ ಸಾಧ್ಯತೆ ಇದ್ದು, ಮುಂಜಾಗೃತಾ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ ದ.ಕ. ಜಿಲ್ಲೆಯಾದ್ಯಂತ ಇಂದು ‘ರೆಡ್ ಅಲರ್ಟ್’ ಘೋಷಿಸಿದೆ.
ಹವಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಇಂದು ಸುಮಾರು 204.4 ಮಿ.ಮೀ.ವರೆಗೆ ಮಳೆ ಬೀಳಲಿದೆ. ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು ಕೆಲ ದಿನ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಆಗಸ್ಟ್ 10, 11ರಂದು ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಮುಂದುವರಿಯಲಿದೆ. ಸಾರ್ವಜನಿಕರು ನದಿ-ಸಮುದ್ರಕ್ಕೆ ಇಳಿಯಬಾರದು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ ಕಟ್ಟಡ ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪಬೇಕು.
ಎಲ್ಲಾ ಜಿಲ್ಲಾ- ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿರಬೇಕು.
ಎಲ್ಲ ಗ್ರಾಪಂ ಪಿಡಿಒಗಳು ಹಾಗೂ ಗ್ರಾಮ ಕರಣಿಕರು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸನ್ನದ್ಧರಾಗಿದ್ದು, ಯಾವುದೇ ವಿಪತ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವುದು ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.
ಯಾವುದೇ ಸಮಸ್ಯೆಗಳಿದ್ದರೆ ಸಾರ್ವಜನಿಕರು ಜಿಲ್ಲಾಡಳಿತದ ಟೋಲ್ ಫ್ರೀ ನಂ.1077 ಮತ್ತು ದ.ಕ ಜಿಲ್ಲಾಡಳಿತ ವಾಟ್ಸಾಪ್ ನಂಬ್ರ- 9483908000 ನ್ನು ಸಂಪರ್ಕಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸೂಚನೆ ನೀಡಿದ್ದಾರೆ.