ನವದೆಹಲಿ: ಅಗತ್ಯ ವಸ್ತು, ತೈಲ ಬೆಲೆ ಏರಿಕೆ ಬಿಸಿ ಇನ್ನು ತಣ್ಣಗಾಗದಿರುವ ಸಮಯದಲ್ಲೇ ಬ್ಯಾಂಕ್ ಸಾಲಗಾರರಿಗೆ ಮತ್ತೊಮ್ಮೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರೆಪೋ ದರವನ್ನು 50 ಮೂಲ ಅಂಶಗಳ ಏರಿಕೆಯೊಂದಿಗೆ ಶೇ. 5.40ಕ್ಕೆ ಹೆಚ್ಚಳ ಮಾಡಿದೆ.
ಇಂದು ಮುಂಬೈನಲ್ಲಿ ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಘೋಷಿಸಿದರು. ನೂತನ ರೆಪೋ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಆರ್‌ಬಿಐ ಈಗ ಸತತ ಮೂರನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದೆ.
ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ಆರ್‌ಬಿಐ, ರೋಪೊ ದರವನ್ನು ಕಳೆದ ಮೇ ತಿಂಗಳಲ್ಲಿ ಶೇ. 0.40 ಹಾಗೂ ಜೂನ್‌ನಲ್ಲಿ ಶೇ. 0.50 ಹೆಚ್ಚಳ ಮಾಡಿತ್ತು.
ರೆಪೋ ದರ ಹೆಚ್ಚಳದಿಂದ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಹೆಚ್ಚಳವಾಗಲಿದೆ. ಆದರೆ ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ.