ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾಗಿ ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 30,000 ರು. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ಎರಡನೇ ತ್ವರಿತಗತಿ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಸುರತ್ಕಲ್ ಸಮೀಪದ ಸಸಿಹಿತ್ತು ನಿವಾಸಿ ವಾಮನ ಪೂಜಾರಿ (59) ಈ ಪ್ರಕರಣದ ಆರೋಪಿ.
2016 ಸೆಪ್ಟೆಂಬರ್‌ನಲ್ಲಿ ಅಪ್ರಾಪ್ತ ವಯಸ್ಸಿನ (16ರ) ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ವಾಮನ ಪೂಜಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದ.
ಆ ಬಳಿಕ ಪದೇ ಪದೇ ಆತ ಆಕೆ ಮೇಲೆ ಅತ್ಯಾಚಾರ ಮಾಡಿದ್ದು, ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. 2017 ಮಾ. 29ರಂದು ಖಾಸಗಿ ಆಸ್ಪತ್ರೆಯಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಈ ಸಂದರ್ಭದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಡಿಎನ್‌ಎ ಪರೀಕ್ಷೆ ನಡೆಸಿದಾಗ ಆರೋಪಿ ವಾಮನ ಪೂಜಾರಿ ಆ ಮಗುವಿನ ಜೈವಿಕ ತಂದೆ ಎನ್ನುವುದು ಸಾಬೀತಾಗಿತ್ತು.