ಮೈಸೂರು: ಫೇಸ್ ಬುಕ್‌ನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿ ವಿವಾಹವಾಗುವುದಾಗಿ ನಂಬಿಸಿ ಪೊಲೀಸ್ ಇನ್ಸ್‌ಪೆಕ್ಟರ್ ಆಕೆಯ ಮೇಲೆ ಅತ್ಯಾಚಾರ ನಡೆಸಿ ವಂಚಿಸಿರುವ ಬಗ್ಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಯನ್ನು ವಿಜಯಪುರ ಜಿಲ್ಲೆಯ ಕೆಎಸ್‌ಆರ್‌ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಯಣ್ಣ ಧನಸಾಗರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಎಸ್‌ಐ ಆಗಿದ್ದ ತಾಯಣ್ಣ ಫೇಸ್‌ಬುಕ್ ಮೂಲಕ ಮೈಸೂರಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆತ ಆಕೆಯನ್ನು ಪ್ರೀತಿಸುವಂತೆ ನಟಿಸಿದ್ದಲ್ಲದೆ, ವಿವಾಹವಾಗುವುದಾಗಿ ನಂಬಿಸಿದ್ದಾನೆ. ನನಗೆ ಮದುವೆಯೇ ಆಗಿಲ್ಲ ಎಂದು ಸುಳ್ಳನ್ನೂ ಹೇಳಿದ್ದಾನೆ.
ದಸರಾ ಹಬ್ಬ ನಡೆಯುವ ವೇಳೆ ಅನೇಕ ಜಿಲ್ಲೆಗಳಿಂದ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಹೀಗಾಗಿ ಆತನೂ 2019 ರ ದಸರಾದಲ್ಲಿ ಭದ್ರತೆಗೆಂದು ಮೈಸೂರಿಗೆ ಆಗಮಿಸಿದ್ದನು. ಈ ವೇಳೆ ಆತ ಯುವತಿಯನ್ನು ಭೇಟಿಯಾಗಿದ್ದಾನೆ.
ಇದಾದ ನಂತರ ಆತ ಯುವತಿಯನ್ನು ವಿಜಯಪುರಕ್ಕೆ ಕರೆಸಿಕೊಂಡು ತನ್ನ ವಸತಿಗೃಹದಲ್ಲಿ ಅತ್ಯಾಚಾರವೆಸಗಿದ್ದಾನೆ. ನಂತರ ರಾಜ್ಯದ ವಿವಿಧ ಸ್ಥಳಗಳಲ್ಲದೆ ಗೋವಾ ರಾಜ್ಯಕ್ಕೂ ಆಕೆಯನ್ನು ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಆಕೆಯು ತನ್ನನ್ನು ವಿವಾಹವಾಗುವಂತೆ ಒತ್ತಾಯ ಮಾಡಿದಾಗ ಆತ ನಿರಾಕರಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಯುವತಿಯು ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.