ಹೇಮಂತ್ ರಾವ್ ನಿರ್ದೇಶನದ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಚಲನಚಿತ್ರ ‘ಸಪ್ತಸಾಗರದಾಚೆ ಎಲ್ಲೋ’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಥಿಯೇಟರ್ ನಲ್ಲಿ ಸುದೀರ್ಘ ಅವಧಿಯತ್ತ ಸಾಗಿದ ಮನು-ಪ್ರಿಯಾ ಪ್ರೇಮ್ ಕಹಾನಿ ‘ಸಪ್ತಸಾಗರದಾಚೆ ಎಲ್ಲೋ’ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದರು. 2ನೇ ಭಾಗಕ್ಕೆ ಚೈತ್ರಾ ಆಚಾರ್ ಜೊತೆಯಾಗಿದ್ದರು. ಚಿತ್ರತಂಡದ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೆಪ್ಟೆಂಬರ್ 1 ರಂದು ಸರಣಿಯ ಮೊದಲ ಸಿನಿಮಾ ತೆರೆಗೆ ಬಂದಿತ್ತು. ಸಪ್ತ ಸಾಗರದಾಚೆ ಎಲ್ಲೋ ಸೈಟ್ – ಎ ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನಗೆದ್ದಿತ್ತಾದರು, ಸೈಡ್ -ಬಿ ಗೆ ಮಿಶ್ರ ಫಲಿತಾಂಶ ವ್ಯಕ್ತವಾಗಿತ್ತು. ಕೆಲವರಿಗೆ ಸಿನಿಮಾ ಬಹಳ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಬೋರ್ ಎನಿಸಿತ್ತು. ಇದು ಓಟಿಟಿಗೆ ಸೂಕ್ತ ಸಿನಿಮಾ ಎಂದು ಕೆಲವರು ಹೇಳಿಬಿಟ್ಟಿದ್ದರು.
ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳ ಮೂಲಕ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಗೆದ್ದಿತ್ತು. ಮೊದಲ ಭಾಗ ನೋಡಿದ ಕೆಲವರು ಎರಡನೇ ಭಾಗಕ್ಕೆ ಬಹಳ ಕಾತರದಿಂದ ಕಾದು ಕೂತಿದ್ದರು. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗ ಥಿಯೇಟರ್‌ಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.
‘ಸಪ್ತಸಾಗರದಾಚೆ ಎಲ್ಲೋ’ ಸೈಡ್-A ಹಿಟ್ ಆಗಿದ್ದು ಸುಳ್ಳಲ್ಲ. ಕನ್ನಡದಲ್ಲಿ ತೆರೆಕಂಡು ಗೆದ್ದ ಚಿತ್ರವನ್ನು ತೆಲುಗಿಗೂ ಡಬ್ ಮಾಡಿ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದರು. ತಕ್ಕಮಟ್ಟಿಗೆ ಅಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಮಾಡಲಾಗಿತ್ತು. ಬಳಿಕ ನವೆಂಬರ್ 17ಕ್ಕೆ ಸೈಡ್- B ತೆರೆಕಂಡಿದ್ದು, ಜನವರಿ 26ರಿಂದ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿತ್ತು.
ಆದರೆ, ಇದೀಗ ದಿಢೀರನೆ ಸಿನಿಮಾವನ್ನು ಒಟಿಟಿ ಫ್ಲಾಟ್ ಫಾರ್ಮ್‌ನಿಂದ ತೆಗೆಯಲಾಗಿದೆ. ಕಳೆದೆರಡು ದಿನಗಳಿಂದ ‘ಸಪ್ತಸಾಗರದಾಚೆ ಎಲ್ಲೋ’ ಸೈಡ್- B ಪ್ರೈಂ ವೀಡಿಯೋದಲ್ಲಿ ಸಿಗುತ್ತಿಲ್ಲ. ಇದಕ್ಕೆ ಕಾರಣ ಏನು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಕೊಂಡೊಕೊಳ್ಳಲು ಅಮೇಜಾನ್ ಪ್ರೈಂ ಹಿಂದೇಟು ಹಾಕುತ್ತಿದೆ. ಕೆಲ ಸಿನಿಮಾಗಳನ್ನು ಸಣ್ಣ ಅವಧಿಯವರೆಗೆ ಮಾತ್ರ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಮಾಡಿಕೊಳ್ಳುತ್ತಿದೆ.
ಒಟಿಟಿಯಿಂದ ಹೊರಬರಲು ಕಾರಣವಾದ್ರು ಏನು?
‘ಸಪ್ತಸಾಗರದಾಚೆ ಎಲ್ಲೋ’ ಸೈಡ್- B ಚಿತ್ರವನ್ನು ಓಟಿಟಿಯಿಂದ ಯಾಕೆ ತೆಗೆದರು ಎನ್ನುವ ಬಗ್ಗೆ ಚಿತ್ರತಂಡ ಇದುವರೆಗೂ ಮಾಹಿತಿ ಹೊರಬಿದ್ದಿಲ್ಲ. ಕೆಲವರ ಪ್ರಕಾರ ಶೀಘ್ರದಲ್ಲೇ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗುತ್ತಿದೆ. ಸೈಡ್- B ರಿಲೀಸ್ ಮೊದಲಿಗೆ ಪ್ರೈಂ ವಿಡಿಯೋ ಹಿಂದೇಟು ಹಾಕಿತ್ತು. ಬಳಿಕ ಒಪ್ಪಿಕೊಂಡಿತ್ತು. ಇದೀಗ ಒಪ್ಪಂದ ಮುಗಿದಿದ್ದು ಸಿನಿಮಾವನ್ನು ತೆಗೆದಿದೆ ಎನ್ನುವ ಚರ್ಚೆ ಜೋರಾಗಿದೆ. ಮೊದಲಿಗೆ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಪುಷ್ಕರ್, ಅಮೇಜಾನ್ ಪ್ರೈಂ ಜೊತೆ ಸಿನಿಮಾ ಡಿಜಿಟಲ್ ರೈಟ್ಸ್ ಒಪ್ಪಂದ ಮಾಡಿಕೊಂಡಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಪುಷ್ಕರ್ ಹಾಗೂ ರಕ್ಷಿತ್ ದೂರಾಗಿದ್ದರು. ಹಾಗಾಗಿ ರಕ್ಷಿತ್ ತಾವೇ ಸಿನಿಮಾ ನಿರ್ಮಾಣದ ಹೊಣೆ ಹೊರುವಂತಾಯಿತು. ಆರಂಭದಲ್ಲಿ ಒಂದು ಸಿನಿಮಾ ಆಗಬೇಕಿದ್ದ ಕಥೆ ಬಳಿಕ 2 ಭಾಗವಾಯಿತು. ಹಾಗಾಗಿ ಎರಡನೇ ಭಾಗದ ಓಟಿಟಿ ಡೀಲ್ ರಕ್ಷಿತ್ ಶೆಟ್ಟಿ ಮಾಡಿಕೊಂಡಿದ್ದರು.
ಈ ಸಿನೆಮಾದಲ್ಲಿ ಬರುವ ಮನು- ಪ್ರಿಯಾ ಲವ್‌ಸ್ಟೋರಿಗೆ ಪರಭಾಷಿಕರು ಕೂಡ ಫಿದಾ ಆಗಿದ್ದು, ಅದೇ ಕಾರಣಕ್ಕೆ ಓಟಿಟಿಯಲ್ಲಿ ಸಿನಿಮಾ ಕಾಣೆಯಾಗುತ್ತಿದ್ದಂತೆ ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ. ಸೈಡ್-B ಯ ಹಿಂದಿ ವರ್ಷನ್ ಅಂತೂ ಓಟಿಟಿಗೆ ಬಂದೇ ಇಲ್ಲ. ಹಾಗಾಗಿ ಯಾವಾಗ ಸಿನಿಮಾ ವೀಕ್ಷಣೆಗೆ ಸಿಗುವುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರು ಕೇಳುತ್ತಿದ್ದಾರೆ. ಈ ಕುರಿತು ಪರಂವಃ ಸಂಸ್ಥೆ ಪ್ರತಿಕ್ರಿಯೆ ನೀಡಬೇಕಾಗಿದೆ.