ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಪೋಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಮಾತಾಡಿದ ಪ್ರವೀಣ್ ನೆಟ್ಟಾರು ತಾಯಿ ‘ಈಗ ಬಂಧಿಸಿದ ಆರೋಪಿಗಳನ್ನು ಇನ್ನು ಮುಂದೆ ಜಾಮೀನು ನೀಡಿಯೋ ಅಥವಾ ಇನ್ನ್ಯಾವುದೋ ರೀತಿಯಲ್ಲಿ ಜೈಲಿನಿಂದ ಹೊರಗೆ ಬಿಡಲೇಬಾರದು. ಒಂದು ವೇಳೆ ಬೆಳ್ಳಾರೆಯ ಪೊಲೀಸರು ಸರಿ ಇರುತ್ತಿದ್ದರೆ ಹೀಗೆ ಆಗುತ್ತಿರಲಿಲ್ಲವೇನೊ. ಬೆಳ್ಳಾರೆ ಪೊಲೀಸರು ಸ್ವಲ್ಪ ಖಾರದಲ್ಲಿ ಇರುತ್ತಿದ್ರೆ ಹೀಗೆ ಆಗುತ್ತಿತ್ತಾ ಹೇಳಿ.
ಅವನನ್ನು ಕೊಲೆ ಮಾಡಿದ ಸಂದರ್ಭ ಅಲ್ಲೆಲ್ಲ ಕರೆಂಟ್ ತೆಗೆದಿದ್ರಂತೆ. ಆ ಸಂದರ್ಭ ಪೊಲೀಸರು ಅಲ್ಲಿರಲಿಲ್ಲವಾ? ಹಂತಕರನ್ನು ಬಂಧಿಸಿದ್ದಾರೆ. ಇನ್ನು ಅವರು ನನ್ನ ಮಗನನ್ನು ಹೇಗೆ ಕೊಂದಿದ್ದಾರೆ ಹಾಗೇ ಅವರನ್ನು ಕೊಚ್ಚಿ ಕೊಲ್ಲಬೇಕು. ಪ್ರವೀಣ್‌ನನ್ನು ಕೊಂದ ಜಾಗದಲ್ಲೇ ತಂದು ಕೊಚ್ಚಿದ್ರೂ ಪರವಾಗಿಲ್ಲ. ಇದರಿಂದ ಹೋದ ನನ್ನ ಮಗನ ಆತ್ಮಕ್ಕೂ ಶಾಂತಿ, ನಮಗೂ ಸ್ವಲ್ಪ ನೆಮ್ಮದಿ ‘ಎಂದು ಕಣ್ಣೀರಿಟ್ಟರು.
ನನಗೆ 4 ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗ ಇದ್ದದ್ದು. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ. ಯಾವ ತಪ್ಪು, ಅನ್ಯಾಯ ಇಲ್ಲದೆ ನನ್ನ ಮಗನನ್ನು ಇವತ್ತು ತೆಗೆದ್ರು. ಕೊಚ್ಚುವ, ಕೊಲ್ಲುವ ಕೆಲಸ ಇಲ್ಲಿಗೆ ಮುಗೀಬೇಕು.
ನಾಳೆ ಇನ್ನೊಬ್ಬರಿಗೂ ಸಮಸ್ಯೆ ಬರಬಹುದು. ನನ್ನ ಹೆಣ್ಣುಮಕ್ಕಳು ಯಾವ ಧೈರ್ಯದಲ್ಲಿ ದಾರಿಯಲ್ಲಿ ನಡೆಯಬೇಕು ಹೇಳಿ. ಯಾವುದಾದರೂ ತಪ್ಪು ಮಾಡಿ, ಅನ್ಯಾಯ ಮಾಡಿ ಯುದ್ಧಕ್ಕೆ ಹೋಗಿದ್ದವನಾದರೆ ಸರಿ. ಆದರೆ ಬರೀ ಹೀಗೇ ಬಂದು ಕೊಲೆ ಮಾಡಿದ್ರೆ ಏನರ್ಥ.
ಅವನು ತೀರಿದ ದಿನ ಬೆಳಿಗ್ಗೆ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಸಂಜೆ 6.45 ಕ್ಕೆ ಕೂಡಾ ನನಗೆ ಕಾಲ್ ಮಾಡಿದ್ದ. ಚಾ ಮಾಡಿಡಿ, ಸ್ನಾನಕ್ಕೆ ಬಿಸಿನೀರು ಕಾಯಿಸಿಡಿ ಅಂತ ಹೇಳಿದ್ದ. ಅವನನ್ನು ಕಾದು ಕಾದು ಸುಸ್ತಾಗಿತ್ತು. ಅವನು ಬರಲೇ ಇಲ್ಲ. ನನ್ನ ಇದ್ದ ಒಂದು ಮಗ ಕೂಡಾ ಹೋದ. ಇನ್ನ್ನ್ಯಾರು ದಿಕ್ಕು ಹೇಳಿ. ನಮಗೆ ಹಣ ಅಲ್ಲ, ಮಗ ಬೇಕು. ಆದ್ರೆ ಇನ್ನು ಬರ್ತಾನಾ?’ ಎಂದು ಗೋಳಿಟ್ಟರು.
ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಯಾವ ವಕೀಲನೂ ಆರೋಪಿಗಳಿಗೆ ವಕಾಲತು ನಡೆಸಬಾರದು ಎಂದು ಪ್ರವೀಣ್ ಅಕ್ಕ ರೋಹಿಣಿ ಕೂಡಾ ವಕೀಲರಿಗೆ ಮನವಿ ಮಾಡಿದರು.