ಬೆಂಗಳೂರು : ದೇಶದಲ್ಲೇ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಕರ್ನಾಟಕದ ಪಿಎಸ್ಐ ಪರೀಕ್ಷಾ ಹಗರಣದ ತನಿಖೆ ಮುಂದುವರೆದಿದೆ.
ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ವೀರೇಶ್, ವೈಜನಾಥ್, ಮಂಜುನಾಥ್ ಮೇಳಕುಂದಿ, ಅರ್ಚನಾ, ಸುನೀತಾ, ಕಾಳಿದಾಸ್, ಸುನೀತಾ ಪಾಟೀಲ್, ಸುರೇಶ್ ಕಾಟೇಗಾವ್, ಸದ್ದಾಂ ಸೇರಿದಂತೆ ಇದುವರೆಗೂ 55ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಎರಡು ಪುಟಗಳ ಪತ್ರ ಬರೆದಿರುವ ಅಭ್ಯರ್ಥಿಗಳು ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪತ್ರದಲ್ಲಿ ಪತ್ರ ಬರೆದಿರುವವರ ಹೆಸರು ಮಾತ್ರ ಬಹಿರಂಗ ಮಾಡಿಲ್ಲ.
ಪಿಎಸ್ ಐ ಪರೀಕ್ಷೆಯ ಅಕ್ರಮದಿಂದಾಗಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಬೇಕು, ಬದಲಾಗಿ ನಿಯತ್ತನಿಂದ ಪರೀಕ್ಷೆ ಬರೆದವರಿಗೆ ಮೋಸವಾಗಬಾರದು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಕರ್ನಾಟಕದಲ್ಲಿ ಹಣ ಇದ್ದವರಿಗೆ ಮಾತ್ರ ಸರ್ಕಾರಿ ಹುದ್ದೆಗಳು ಎನ್ನುವಂತ ವ್ಯವಸ್ಯೆ ಬಂದುಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ಮಾನಸಿಕವಾಗಿ ಸತ್ತುಹೋಗಿದ್ದೇವೆ ಎಂದು ತಮ್ಮ ನೀವು ತೋಡಿಕೊಂಡಿದ್ದಾರೆ.
ಮಾತ್ರವಲ್ಲ ಇನ್ನು ಮುಂದೆ ಸರ್ಕಾರಿ ಹುದ್ದೆಗಳಿಗಾಗಿ ಕರೆಯುವ ಯಾವ ಪರೀಕ್ಷೆಗಳನ್ನೂ ಬರೆಯುವುದಿಲ್ಲ ಎಂದಿದ್ದಾರೆ. ಅಲ್ಲದೆ 2021ರಲ್ಲಿ ನಡೆದ ಎಫ್ ಡಿಎ ಪರೀಕ್ಷೆಯಲ್ಲಿಯೂ ಅಕ್ರಮವಾಗಿದೆ ಎಂದು ಆರೋಪಿಸಿರುವ ಅಭ್ಯರ್ಥಿಗಳು ಈ ಬಗ್ಗೆ ಕೂಡಾ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ. ಹಾಗಾಗಿ ಅವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಒಂದು ವೇಳೆ ನಮಗೆ ನ್ಯಾಯಕೊಡಿಸದೇ ಹೋದಲ್ಲಿ ಮುಂದೆ ಟೆರರಿಸ್ಟ್ ಗಳ ಕೈಜೋಡಿಸುವ ಎಚ್ಚರಿಕೆಯನ್ನು ಕೂಡಾ ಈ ಪತ್ರದ ಮೂಲಕ ನೀಡಲಾಗಿದೆ.
ಮಾತ್ರವಲ್ಲ, ಟೆರೆರಿಸ್ಟ್ ಗಳ ಜೊತೆ ನಕ್ಸಲ್ ಸಂಘಟನೆ ಸೇರಲು ಇಚ್ಛಿಸಿರುವುದಾಗಿಯೂ ಹೇಳಿದ್ದಾರೆ. ಒಟ್ಟು ಎಂಟು ಮಂದಿ ಇದ್ದು, ಎಲ್ಲರೂ ಒಟ್ಟಾಗಿ ಈ ನಿರ್ಧಾರ ಮಾಡಿರುವುದಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.