ಮಂಗಳೂರು: ಸಮುದಾಯ ಆರೋಗ್ಯ ಅಧಿಕಾರಿಗಳ ಖಾಯಂಮಾತಿ, ಪ್ರೋತ್ಸಾಹ ಧನ ಹೆಚ್ಚಳ, ಆರೋಗ್ಯ ಮತ್ತು ಕೇಂದ್ರಗಳ ಸಶಕ್ತೀಕರಣ ಹಾಗೂ ಕಿರುಕುಳ ಮುಕ್ತ ಕೆಲಸ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನಾ ಧರಣಿ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜರುಗಿತು.
ಭಾರತ ಸರಕಾರದ ಯೋಜನೆಯಂತೆ 2018ರಿಂದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೆ ನೇಮಕ ಮಾಡಿದ್ದಾರೆ. ಸಮಗ್ರ ಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಸಿಗಬೇಕೆಂದು ನಮ್ಮನ್ನು ನಿಯೋಜನೆ ಮಾಡಿದ್ದಾರೆ.
ನಾವು 15 ಮಾನದಂಡಗಳನ್ನು ಒಳಗೊಂಡು ಕೆಲಸ ಮಾಡುತ್ತಿದ್ದೇವೆ. ಆದರೆ ಕರ್ನಾಟಕದಲ್ಲಿ ನಮಗೆ ಕೇವಲ 8 ಸಾವಿರ ಮಾತ್ರ ವೇತನ ನೀಡಿ ದುಡಿಸಲಾಗುತ್ತಿದೆ. ಇದು ಸರಿಯಲ್ಲ. ನಮಗೂ 15,000ದವರೆಗೆ ಇನ್‌ಸೆಂಟಿವ್ಸ್ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 317 ಸಿಬ್ಬಂದಿ ಆರೋಗ್ಯ ಸೇವೆಯಲ್ಲಿ, ಕರ್ನಾಟಕದಲ್ಲಿ 6182 ಸಿಬ್ಬಂದಿ ಸೇವೆ ನಿರ್ವಹಿಸುತ್ತಿದ್ದಾರೆ.
ಸರಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಜ್ಯೋತಿ ಆಗ್ರಹಿಸಿದರು..