ಮಂಗಳೂರು : ಪಲ್ಗುಣಿ ನದಿಯ ಶಾಖೆಯಾಗಿರುವ ತೋಕೂರು ಹಳ್ಳಕ್ಕೆ ಮಾರಕ ಕೈಗಾರಿಕಾ ತ್ಯಾಜ್ಯಗಳನ್ನು ಹರಿಯ ಬಿಡುವ, ಆ ಮೂಲಕ ಪಲ್ಗುಣಿ ನದಿಯನ್ನು ವಿಷಮಯಗೊಳಿಸುವ ಎಮ್ ಆರ್ ಪಿ ಎಲ್ ಸಹಿತ ಕೈಗಾರಿಕಾ ಘಟಕಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸೆಪ್ಟಂಬರ್ 30 ರಂದು ಬೈಕಂಪಾಡಿಯಲ್ಲಿರುವ “ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ”ಯ ಕಚೇರಿ ಮುಂಭಾಗ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಎಂ ಆರ್ ಪಿ ಎಲ್ ಸಹಿತ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರವ ವಿವಿಧ ಕೈಗಾರಿಕಾ ಘಟಕಗಳು ಪಲ್ಗುಣಿ ನದಿಯನ್ನು ಸೇರುವ ಜೋಕಟ್ಟೆ, ತೋಕೂರು ಗ್ರಾಮಗಳ ಅಂತರ್ಜಲದ ಮೂಲವಾಗಿರುವ ತೋಕೂರು ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯವನ್ನು ಸತತವಾಗಿ ಹರಿಯಬಿಡುತ್ತವೆ.
ಮಾರಕವಾದ ಕೈಗಾರಿಕಾ ತ್ಯಾಜ್ಯದಿಂದಾಗಿ ತೋಕೂರು ಹಳ್ಳ ಸಂಪೂರ್ಣವಾಗಿ ಕಲುಷಿತಗೊಂಡು ಬಳಕೆಗೆ ಅನರ್ಹವಾಗಿದೆ. ಪಲ್ಗುಣಿ ನದಿಯಲ್ಲಿಯೂ ಮಾಲಿನ್ಯ ಹೆಚ್ಚಳಗೊಂಡು ಸಾಂಪ್ರದಾಯಿಕ ಮೀನುಗಾರಿಕೆ, ಮರುವಾಯಿ, ಚಿಪ್ಪು ಸಂಗ್ರಹ ಅಸಾಧ್ಯವಾಗಿದೆ. ಸ್ಥಳೀಯ ರೈತರು ಕೃಷಿ ಚಟುವಟಿಕೆ ನಿಲ್ಲಿಸುವಂತಾಗಿದೆ. ಬಹಳ ಪ್ರಧಾನವಾಗಿ ಎಮ್ ಆರ್ ಪಿ ಎಲ್, ಅದಾನಿ ವಿಲ್ಮಾ, ರುಚಿ ಗೋಲ್ಡ್, ಯು ಬಿ ಬಿಯರ್, ಮೀನು ಸಂಸ್ಕರಣಾ ಘಟಕಗಳು ತಮ್ಮ ಕೈಗಾರಿಕಾ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ತೋಕೂರು ಹಳ್ಳಕ್ಕೆ ಹರಿಯ ಬಿಡುತ್ತಿವೆ.
ಈ ಕುರಿತು ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮಗಳು ಜರುಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಂತೂ ಪರಿಸರ ರಕ್ಷಣೆಯ ಬದಲಿಗೆ ನಿಯಮ ಉಲ್ಲಂಘಿಸುವ ಕೈಗಾರಿಕೆಗಳ ರಕ್ಷಣೆ ಗಾಗಿಯೆ ಸದಾ ಕಾರ್ಯಪ್ರವೃತ್ತವಾಗುತ್ತದೆ. ಇದರಿಂದ ತೋಕೂರು ಹಳ್ಳ ಮಾತ್ರವಲ್ಲದೆ, ಜೀವನದಿ ಪಲ್ಗುಣಿ ತ್ಯಾಜ್ಯ ಗುಂಡಿಯಾಗಿ ಬದಲಾಗುತ್ತಿದೆ.
ಕಳೆದ ನಾಲ್ಕೈದು ದಿನಗಳಿಂದ ಎಮ್ ಆರ್ ಪಿ ಎಲ್ ಮೂರನೇ ಹಂತದ ಘಟಕದಿಂದ ಸಂಸ್ಕರಿಸದ ಪೆಟ್ರೋ ಕೆಮಿಕಲ್ ತ್ಯಾಜ್ಯವನ್ನು ತೋಕೂರು ಹಳ್ಳಕ್ಕೆ ಹರಿಸುತ್ತಿದೆ. ಪ್ರಶ್ನಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಪ್ರಮುಖರೊಂದಿಗೆ ಉದ್ದಟತನದೊಂದಿಗೆ ನಡೆದು ಕೊಳ್ಳುತ್ತಿದೆ. ಇದರಿಂದ ಸ್ಥಳೀಯ ಮೂರ್ನಾಲ್ಕು ಗ್ರಾಮಗಳ ಅಂತರ್ಜಲವೂ ಮಲಿನಗೊಂಡಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.
ಈ ಹಿನ್ನಲೆಯಲ್ಲಿ ಎಮ್ ಆರ್ ಪಿ ಎಲ್ ಸಹಿತ ಅಕ್ರಮವಾಗಿ ಕೈಗಾರಿಕಾ ತ್ಯಾಜ್ಯ ಹರಿಯಬಿಡುವ ಕಂಪೆನಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ, ಕ್ರಮ ಕೈಗೊಳ್ಳದ ಮಾಲಿನ್ಯ ನಿಯಂತ್ರಣ ಮಂಡಳಿಯ ಬೇಜವಾಬ್ದಾರಿತನವನ್ನು ಖಂಡಿಸಿ, ಜೀವ ನದಿ ಪಲ್ಗುಣಿ, ತೋಕೂರು ಹಳ್ಳವನ್ನು ರಕ್ಷಿಸಲು ಒತ್ತಾಯಿಸಿ ಸೆಪ್ಟಂಬರ್ 30 ರಂದು ಬೆಳಿಗ್ಗೆ 10 : 00 ಗಂಟೆಗೆ ಬೈಕಂಪಾಡಿಯಲ್ಲಿರುವ ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ ಪ್ರಕಟಣೆ ತಿಳಿಸಿದೆ.