ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣ :19 ವರ್ಷಗಳ ನಂತರ ಪ್ರಮುಖ ಆರೋಪಿ ಬಂಧನ..!
ಅಹಮದಬಾದ್ : ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಆರೋಪಿಯನ್ನು 19 ವರ್ಷಗಳ ನಂತರ ಪೊಲಿಸರು ಬಂಧಿಸಿದ್ದಾರೆ.
ಗುಜರಾತಿನ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ರಫೀಕ್ ಹುಸೇನ್ ಭಾತುಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗೋಧ್ರಾ ನಗರದವನಾದ ರಫೀಕ್, ರೈಲಿಗೆ ಬೆಂಕಿ ಹಚ್ಚುವ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಆರೋಪಿಸಲಾಗಿತ್ತು.
ಗೋಧ್ರಾದಿಂದ ಪರಾರಿಯಾಗಿ ತಲೆಮರೆಸಿಕೊಂಡ ಬಳಿಕ ಆತ ದೆಹಲಿಯ ರೈಲು ನಿಲ್ದಾಣ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರಕರಣದ 19 ವರ್ಷಗಳ ಬಳಿಕ ಬಂಧಿಸಲಾಗಿದೆ.
ರೈಲ್ವೆ ನಿಲ್ದಾಣ ಬಳಿಯ ಸಿಗ್ನಲ್ ಫಾಲಿಯಾ ಪ್ರದೇಶದಲ್ಲಿನ ಮನೆಯೊಂದರಲ್ಲಿ ರಫೀಕ್ ಇರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ.
ರೈಲು ಬೋಗಿಗಳಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಪೂರೈಕೆ ಮಾಡಿದ್ದ ರಫೀಕ್, ಗಲಭೆಗೂ ಪ್ರಚೋದನೆ ನೀಡಿದ್ದ. ತನಿಖೆ ವೇಳೆ ಈತನ ಪಾತ್ರ ಬಹಿರಂಗವಾಗಿತ್ತು.
ಇದನ್ನು ಅರಿತ ಕೂಡಲೇ ಆತ ತಲೆಮರೆಸಿಕೊಂಡು ದೆಹಲಿಗೆ ಪರಾರಿಯಾಗಿದ್ದ. ರಫೀಕ್ ವಿರುದ್ಧ ಕೊಲೆ ಮತ್ತು ಗಲಭೆ ಸೃಷ್ಟಿಸಿದ ಇತರೆ ಗುರುತರ ಆರೋಪಗಳಿಗಳಿವೆ.
ಗೋಧ್ರಾ ರೈಲು ನಿಲ್ದಾಣದಲ್ಲಿ ಆತ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬೋಗಿಗಳ ಮೇಲೆ ಕಲ್ಲು ಎಸೆದು ಪೆಟ್ರೋಲ್ ಸುರಿದಿದ್ದ. ಬಳಿಕ ಇತರೆ ಅರೋಪಿಗಳು ಬೆಂಕಿ ಹಚ್ಚಿದ್ದರು.