ಮಂಗಳೂರು : ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಉತ್ತರ ದೆಹಲಿ ಮೂಲದ ಸಾಂಸ್ಕೃತಿಕ ಸಂಸ್ಥೆ NDCA ಯು ತಮ್ಮ ಹತ್ತನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ 2022 23 ನೇ ಸಾಲಿನ ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯೆಂದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯನ್ನು ಹಾಗೆ ಶ್ರೀಮತಿ ಸೀಮಾ ಬೊಪ್ಪಣ್ಣ ಅವರನ್ನು ಭಾರತದ ಅತ್ಯುತ್ತಮ ಶೈಕ್ಷಣಿಕ ಆಡಳಿತ ನಿರ್ದೇಶಕಿಯೆಂದು ಘೋಷಣೆ ಮಾಡಿದೆ.
ಕಳೆದ ಹಲವು ದಶಕಗಳಿಂದ ಉತ್ತಮ ಪರೀಕ್ಷಾ ಫಲಿತಾಂಶವನ್ನು, ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣವನ್ನು ಮತ್ತು ವಿಶ್ವದಾದ್ಯಂತ ಅವಶ್ಯವಾದ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುವುದಾಗಿ NDCA ಸಂಸ್ಥೆಯು ತಿಳಿಸಿದೆ.
ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಆಡಳಿತ ನಿರ್ದೇಶಕಿಯಾದ ಸೀಮಾ ಬೊಪ್ಪಣ್ಣ ಅವರು ಈ ಪ್ರಶಸ್ತಿಯನ್ನು ತೆಲಂಗಾಣ ರಾಜ್ಯದ ಶಿಕ್ಷಣ ಸಚಿವರಾದ ಸಬಿತಾ ಇಂದ್ರ ರೆಡ್ಡಿ ಮತ್ತು NDCA ಸಂಸ್ಥೆಯ ಪ್ರತಿನಿಧಿಯಾದ ಭಾಗೀ ನಾಗೇಂದ್ರ ಗೌಡ ಅವರಿಂದ ತಾಜ್ ಡೆಕ್ಕನ್ ಹೋಟೆಲ್, ಬಂಜಾರ ಹಿಲ್ಸ್, ಹೈದರಾಬಾದ್‌ನಲ್ಲಿ ಸ್ವೀಕರಿಸಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕಾರ್ಯದರ್ಶಿಗಳಾದ ರಾಹುಲ್ ಬೊಜ್ಜ ಲೋಕಸಭಾ ಸದಸ್ಯರಾದ ಸಮುದ್ರಲ ವೇಣುಗೋಪಾಲಚಾರಿ, ತೆಲಂಗಾಣ ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷರಾದ ಉಪ್ಪಾಳ ಶ್ರೀನಿವಾಸ ಗುಪ್ತಾ ಅವರು ಭಾಗವಹಿಸಿದ್ದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ಮತ್ತು ಶೈಕ್ಷಣಿಕ ಆಡಳಿತ ನಿರ್ದೇಶಕಿಯಾದ ಸೀಮಾ ಬೊಪ್ಪಣ್ಣ ಅವರ ಕಾರ್ಯಕ್ಷಮತೆ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಪೋಷಕರಿಂದ ಆಶೀರ್ವಾದವನ್ನು ಪಡೆದ ಶ್ರೀಮತಿ ಸೀಮಾ ಬೊಪ್ಪಣ ಅವರು ನಮ್ಮ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗದವರ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಹಾಗೂ ನಮ್ಮ ಶಾಲೆಯಲ್ಲಿ ನಡೆಸುತ್ತಿರುವ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಈ ಪ್ರಶಸ್ತಿ ದೊರೆಯಲು ಕಾರಣ ಎಂದಿದ್ದಾರೆ. ಅಲ್ಲದೆ ಇಂತಹ ಕಾರ್ಯವನ್ನು ಗುರುತಿಸಿ ಅಭಿನಂದಿಸಿದ NDCA ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುತ್ತ ಈ ಪ್ರಶಸ್ತಿಯು ನಮ್ಮ ಜವಾಬ್ದಾರಿಗಳನ್ನು ಇನ್ನೂ ಹೆಚ್ಚಿಸಿದೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ NDCA ಸಂಸ್ಥೆಯ ಕಾರ್ಯದರ್ಶಿಗಳು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಬಿ. ಎಸ್. ರಾವ್ , ಝಾನ್ಸಿ ಲಕ್ಷ್ಮಿ ಬಾಯಿ , ಆಡಳಿತ ನಿರ್ದೇಶಕರಾದ ನಾಗೇಂದ್ರ , ಸುಷ್ಮಾ , ಶ್ರೀಧರ್ , ಕೇಂದ್ರ ಕಛೇರಿಯ ಸಿಬ್ಬಂದಿಗಳು, ಎಜಿಎಂ ಗಳು, ಪ್ರಾಂಶುಪಾಲರು, ಡೀನ್‌ಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇರುವುದೇ ಬಡವರ ಕಣ್ಣೀರು ಒರೆಸುವುದಕ್ಕೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಒಕ್ಕೂಟ ನಿರಂತರವಾಗಿ ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ನೆರವು ನೀಡುತ್ತಾ ಬಂದಿದೆ. ಮುಂದೆಯೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಬಂಟ್ಸ್ ಹಾಸ್ಟೆಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಸಹಾಯಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ ಸಮಾಜ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಪ್ರವೃತ್ತವಾಗುತ್ತದೆ. ಅದೇ ರೀತಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇತರೆ ಸಮಾಜದವರಿಗೂ ನೆರವಿನ ಹಸ್ತ ನೀಡುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕವಾಗಿ ಮಾತನಾಡಿ, 37 ವರ್ಷಗಳ ಇತಿಹಾಸ ಇರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಹಲವು ಕಾರ್ಯಗಳು ನಿರಂತರವಾಗಿ ನಡೆದಿದೆ. ದಾನಿಗಳ ನೆರವಿನಿಂದ ಮತ್ತು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳ ಶ್ರಮದಿಂದ ಸಹಾಯಹಸ್ತ ನೀಡಲು ಸಾಧ್ಯವಾಯಿತು. ಈ ಬಾರಿ 16 ಲಕ್ಷ ರೂಪಾಯಿ ಹಣವನ್ನು ವಿತರಿಸಲಾಯಿತು ಎಂದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಒಕ್ಕೂಟಕ್ಕೆ ಯಾರೇ ಅರ್ಜಿ ಸಲ್ಲಿಸಿದರೂ ಅರ್ಜಿಯನ್ನು ತಿರಸ್ಕರಿಸದೆ ಪರಿಶೀಲಿಸಿ ನೆರವನ್ನು ನೀಡಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆಸ್ಟ್ರೇಲಿಯಾದ ಉದ್ಯಮಿ ದಯಾನಂದ ಶೆಟ್ಟಿ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಂದ್ರಹಾಸ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಸತ್ಯಪ್ರಸಾದ್ ಶೆಟ್ಟಿ, ಸುಧಾಕರ ಪೂಂಜ ಸುರತ್ಕಲ್, ಹರ್ಷಕುಮಾರ್ ರೈ, ಗೀತಾ ರೈ, ಕೊಲ್ಲಾಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು.
ಉದಯ ಕುಮಾರ್ ಪ್ರಾರ್ಥನೆಗೈದರು. ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ ವಂದಿಸಿದರು.
ಬಂಟ್ವಾಳ : ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ದಾಳಿ ನಡೆಸಿ 30 ಲಕ್ಷ ರೂಪಾಯಿ ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಈ ಘಟನೆ ನಡೆದಿದೆ.
ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿದ ಖದೀಮರು ಬರೋಬ್ಬರಿ 30 ಲಕ್ಷ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ತನಿಖೆ ನಡೆಸಿ, ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ದ.ಕ ಜಿಲ್ಲಾ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.
ಮಂಗಳೂರು: “ಮಂಗಳೂರಿನಲ್ಲಿ ಓಡಾಡುವ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಸದ್ಯಕ್ಕೆ ಏರಿಕೆ ಮಾಡುವುದಿಲ್ಲ” ಎಂದು ಕೆನರಾ ಬಸ್ ಮಾಲಕರ ಸಂಘ ನಿರ್ಧರಿಸಿದೆ.
ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸರಕಾರಿ ಬಸ್ ಟಿಕೆಟ್ ದರ ಏರಿಸಲು ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, “ರಾಜ್ಯ ಸರಕಾರದ ಶಕ್ತಿ ಯೋಜನೆ ಆರಂಭದ ಬಳಿಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ವಾಹನದ ಬಿಡಿ ಭಾಗಗಳು, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಕೋವಿಡ್ ಬಳಿಕ ಬಸ್ ಮಾಲಕರೂ ಸಂಕಷ್ಟದಲ್ಲಿದ್ದು, ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ. ಆದರೆ ಸದ್ಯಕ್ಕೆ ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು” ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಪ್ರತಿಕ್ರಿಯಿಸಿ “ಮಂಗಳೂರಿನಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಟಿಕೆಟ್ ದರ ಏರಿಕೆಯ ಬಗ್ಗೆ ಚಿಂತನೆ ನಡೆಸಿಲ್ಲ. ಸದ್ಯದ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅವಲೋಕಿಸಿ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು” ಎಂದು ಹೇಳಿದ್ದಾರೆ.