ನವದೆಹಲಿ: ಪಂಚರಾಜ್ಯ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳು ಬಿಡುಗಡೆಯಾಗಿದೆ.
ಅದರ ಪ್ರಕಾರ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು,
ಗೋವಾ ಮತ್ತು ಪಂಜಾಬ್‌ನಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಪಂಜಾಬ್‌ನಲ್ಲಿ ಅನುಕೂಲಕರ ವಾತಾವರಣ ಇದೆ. ಗೋವಾದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ‘ರಿಪಬ್ಲಿಕ್ ಟಿವಿ–ಪಿ–ಎಂಎಆರ್‌ಕ್ಯು’ ಸಮೀಕ್ಷಾ ವರದಿ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದ್ದು, ಅಂತರ ಕಡಿಮೆಯಾಗಲಿದೆ. 2017ರಲ್ಲಿ ಗಳಿಸಿದ್ದ 312 ಸ್ಥಾನಕ್ಕೆ ಬದಲಾಗಿ 252–272 ಸ್ಥಾನ ದೊರೆಯಬಹುದು.
ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಕ್ಷ (ಎಸ್‌ಪಿ) 111–131 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷಾ ವರದಿ ಹೇಳಿದೆ. ಎಸ್‌ಪಿಯ ಸಂಖ್ಯಾಬಲ ಕಳೆದ ಚುನಾವಣೆಗೆ ಹೋಲಿಸಿದರೆ ಎರಡು ಪಟ್ಟಿಗಿಂತಲೂ ಹೆಚ್ಚಾಗಲಿದೆ.
ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಈ ಬಾರಿ ಮತ್ತಷ್ಟು ಹೀನಾಯ ಸೋಲು ಅನುಭವಿಸಬಹುದು. ಕಳೆದ ಬಾರಿ ಪಕ್ಷವು 19 ಸ್ಥಾನ ಗಳಿಸಿದ್ದರೆ ಈ ಬಾರಿ ಕೇವಲ 8–16 ಸ್ಥಾನಗಳು ದೊರೆಯಬಹುದು. ಕಾಂಗ್ರೆಸ್‌ಗೆ ಕೇವಲ 3ರಿಂದ 9 ಸ್ಥಾನಗಳು ದೊರೆಯಬಹುದು ಎಂದು ವರದಿ ಹೇಳಿದೆ.
ಬಿಜೆಪಿಯು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ‘ಇಂಡಿಯಾ ಟಿವಿ–ಗ್ರೌಂಡ್ ಝೀರೋ ರಿಸರ್ಚ್’ ಸಮೀಕ್ಷೆ ಕೂಡ ಅಭಿಪ್ರಾಯಪಟ್ಟಿದೆ. ಆದರೆ 230–235 ಸೀಟ್ ಇರಬಹುದಷ್ಟೆ ಎಂದಿದೆ.
ಎಸ್‌ಪಿ ಶೇ 36.2ರ ಮತಹಂಚಿಕೆಯೊಂದಿಗೆ 160-165 ಸ್ಥಾನ ಗಳಿಸಬಹುದು. ಕಾಂಗ್ರೆಸ್ 2–7, ಬಿಎಸ್‌ಪಿ 2–3 ಹಾಗೂ ಇತರರು 1–3 ಸ್ಥಾನ ಗಳಿಸಬಹುದು ಎಂದು ಹೇಳಿದೆ.
‘ರಿಪಬ್ಲಿಕ್ ಟಿವಿ–ಪಿ–ಎಂಎಆರ್‌ಕ್ಯು’ ಸಮೀಕ್ಷಾ ವರದಿ ಪ್ರಕಾರ, ಪಂಜಾಬ್‌ನಲ್ಲಿ ಎಎಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. 50–56 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.
ಚುನಾವಣೆ ನಡೆಯುತ್ತಿರುವ 5 ರಾಜ್ಯಗಳ ಪೈಕಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿರುವ ಏಕೈಕ ರಾಜ್ಯವಾಗಿದೆ ಪಂಜಾಬ್.
ಇಲ್ಲಿ ಕಾಂಗ್ರೆಸ್ ಶೇ 35.1ರ ಮತಹಂಚಿಕೆಯೊಂದಿಗೆ 42–48 ಸ್ಥಾನ ಗಳಿಸಬಹುದು. ಅಕಾಲಿ ದಳ 13–17, ಬಿಜೆಪಿ ಮತ್ತು ಮಿತ್ರ ಪಕ್ಷಗಳು 1–3 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಉತ್ತರಾಖಂಡದಲ್ಲಿ ಬಿಜೆಪಿ 36–42 ಸ್ಥಾನ ಗಳಿಸಲಿದೆ (ಕಳೆದ ಬಾರಿ 56 ಕ್ಷೇತ್ರಗಳಲ್ಲಿ ಜಯಿಸಿತ್ತು). ಕಾಂಗ್ರೆಸ್ 25–31 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಎಎಪಿ 2 ಸ್ಥಾನ ಗಳಿಸಬಹುದು ಎಂದು ಸಮೀಕ್ಷಾ ವರದಿ ಹೇಳಿದೆ.
ಮಣಿಪುರದಲ್ಲಿಯೂ 31–37 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ 13–19, ಎನ್‌ಪಿಪಿ 3–9 ಹಾಗೂ ಎನ್‌ಪಿಎಫ್ 1–5 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ.
ಗೋವಾದಲ್ಲಿ ಬಿಜೆಪಿಗೆ 16–20 ಸ್ಥಾನಗಳು ದೊರೆಯಬಹುದು. ಕಾಂಗ್ರೆಸ್‌ಗೆ 9–13, ಎಎಪಿಗೆ 4–8, ತೃಣಮೂಲ ಕಾಂಗ್ರೆಸ್‌ಗೆ 1–5 ಹಾಗೂ ಇತರರು 1–3 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷಾ ವರದಿ ತಿಳಿಸಿದೆ.