ಮಂಗಳೂರು: ಕೊಲೆ ಸಂಚು ರೂಪಿಸಿದ ಆರೋಪದಲ್ಲಿ ಡಿ.14ರಂದು ಬಂಧಿತರಾದ ಐವರು ಆರೋಪಿಗಳಲ್ಲಿ ಪ್ರಸಾದ್ ಹಾಗೂ ಚೇತನ್ ಕೊಟ್ಟಾರಿ ನಿರಪರಾಧಿಗಳು. ವಿಚಾರಣೆ ನೆಪದಲ್ಲಿ ಕರೆದೊಯ್ದು ಪೊಲೀಸರು ಬಂಧಿಸಿದ್ದಾರೆ ಎಂದು ಇಬ್ಬರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇತನ್ ಕೊಟ್ಟಾರಿ ಪತ್ನಿ ಭಾಗ್ಯಶ್ರೀ, ಆರೋಪಿ ಎಂದು ಬಂಧಿಸಿದ ಚೇತನ್ ಕೊಟ್ಟಾರಿಗೂ ಪೊಲೀಸರು ಬಂಧಿಸಿದ ಪ್ರಕರಣಕ್ಕೂ ಯಾವುದೇ ಸಂಬಂಧವೇ ಇಲ್ಲ.
ನನ್ನ ಗಂಡ ಯಾವುದೇ ತಪ್ಪೇ ಮಾಡಿಲ್ಲ. ಅವರು ಸಮಾಜಕ್ಕೆ ಸಹಾಯ ಮಾಡುತ್ತಿದ್ದರು. ಮದುವೆ ಮುಂಚೆ ಹಿಂದೂ ಸಂಘಟನೆಗಳಲ್ಲಿ ಇದ್ದರು. ಆದರೆ ಇಂತಹ ಚಟುವಟಿಕೆ ನಡೆಸಿಲ್ಲ. ಇದೀಗ ಜಮೀನು ಬ್ರೋಕರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಇದರಿಂದ ನಮ್ಮ ಮಾರ್ಯಾದೆ ಹೋಗಿದೆ.
ಮಾಧ್ಯಮಗಳಲ್ಲಿ ನೋಡಿ ಬಂಧನದ ವಿಷಯ ಗೊತ್ತಾಯಿತು ಎಂದ ಅವರು ವಿಚಾರಣೆಗೆ ಅಂತ ಕರೆದೊಯ್ದು ಬಂಧಿಸಿದ್ದಾರೆ. ಈ ಬಗ್ಗೆ ನಾವು ನಂಬಿದ ದೈವ ದೇವರಿಗೆ ಹರಕೆ ಹೇಳಿದ್ದೇವೆ. ನಾವು ಹೇಗೆ ಜೀವನ ನಡೆಸುವುದು. ನಮಗೂ ಮಕ್ಕಳಿದ್ದಾರೆ. ಅವರ ಭವಿಷ್ಯ ಏನು? ಇದೀಗ ಅವನನ್ನು ಬಂಧಿಸಿದ್ದಾರೆ ಎಂದು ಭಾಗ್ಯಶ್ರೀ ಆರೋಪಿಸಿದ್ದಾರೆ.
ಆರೋಪಿ ಪ್ರಸಾದ್ ಪತ್ನಿ ನಿಕ್ಷಿತಾ ಅವರು ಮಾತನಾಡಿ, ನನ್ನ ಗಂಡ ಪ್ರತಿಯೊಬ್ಬರಿಗೆ ಉಪಕಾರ ಮಾಡುತ್ತಿದ್ದರು. ಅವರ ತಾಯಿ ಹಾಸಿಗೆ ಹಿಡಿದಿದ್ದಾರೆ. ನಮಗೆ ಆಧಾರ ಅಂತ ಇರುವುದು ಅವರೇ? ಯಾರಿಗೂ ಕಷ್ಟ ಅಂದರೆ ಅವರ ಬಳಿ ಇಲ್ಲದಿದ್ದರೂ ಉಪಕಾರ ಮಾಡುತ್ತಿದ್ದರು.
ಯಾರದ್ದೋ ಮಾತು ಕೇಳಿ ಹೀಗೆ ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪರಿಚಯವಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಅವರ ಮೇಲೆ ರೌಡಿಶಿಟರ್ ಇತ್ತು. ಅದಾದ ನಂತರ ಅವರು ಉತ್ತಮ ವ್ಯಕ್ತಿಯಾಗಿ ಬಾಳಿದ್ದರು. ಕೆಲ ದಿನಗಳ ಹಿಂದೆ ರೌಡಿಶೀಟ್‌ನಿಂದ ಅವರ ಹೆಸರು ತೆಗೆದುಹಾಕಿದ್ದರು. ಇದೀಗ ವಿಚಾರಣೆ ಅಂತ ಕರೆದು ಬಂಧಿಸಿದ್ದಾರೆ. ವಿಚಾರಣೆಗೆ ಕರೆದು ತಪ್ಪಿಲ್ಲ ಅಂತ ಗೊತ್ತಾದರೆ ಬಿಟ್ಟು ಕಳುಹಿಸಬೇಕು.
ಅದು ಬಿಟ್ಟು ಸ್ಟೇಷನ್‌ನಲ್ಲಿ ಕುಳ್ಳಿರಿಸಿ ಈ ರೀತಿ ಮಾಡಿದ್ದು ತಪ್ಪು ಎಂದು ಆರೋಪಿ ಪ್ರಸಾದ್ ತಂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.