ಮಂಗಳೂರು: ಬಿಲ್ಲವ ಸಮಾಜದ ಬೇಡಿಕೆಗಳ ಪರವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಪ್ರಣವಾನಂದ ಸ್ವಾಮಿ ಅವರು ಅಧ್ಯಾತ್ಮಿಕತೆಯ ಹೆಸರಲ್ಲಿ ಡರ್ಟಿ ಗೇಮ್ ಆಡುತ್ತಿದ್ದಾರೆ. ಅವರಿಗೆ ಯಾರೂ ಪ್ರೋತ್ಸಾಹ ಕೊಡಬಾರದು. ಅವರನ್ನು ಬೆಂಬಲಿಸುವವರು ನಾರಾಯಣ ಗುರುಗಳ ಅನುಯಾಯಿಗಳಲ್ಲ. ಅವರ ಪಾದಯಾತ್ರೆಗೆ ಸರಕಾರ ಅನುಮತಿ ನೀಡಬಾರದು ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಭದ್ರಾನಂದ ಸ್ವಾಮಿ ಆಗ್ರಹಿಸಿದ್ದಾರೆ.
ತಾನು ನಾರಾಯಣ ಗುರುಗಳ ವಂಶಸ್ಥ ಎಂದು ಹೇಳಿ ಕೊಂಡಿರುವ ಭದ್ರಾನಂದ ಅವರು, ಇಂದು ಇಲ್ಲಿ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾರಾಯಣ ಗುರುಗಳು ಮದ್ಯಪಾನ ವಿರೋಧಿಗಳಾಗಿದ್ದರು.
ಅದರೆ ಪ್ರಣವಾನಂದ ಸ್ವಾಮಿ ಬಿಲ್ಲವರ ಮೂಲ ಕುಲ ಕಸುಬು ಆಗಿದ್ದ ಶೇಂದಿ ವ್ಯವಹಾರಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ.
ಕರ್ನಾಟಕದಲ್ಲಿ ಶೇಂದಿ ವ್ಯವಹಾರ ನಡೆಸುವುದು ಅವರ ಉದ್ದೇಶವಿದ್ದಂತೆ ಕಾಣುತ್ತಿದೆ. ಮೂರ್ತೆದಾರಿಕೆಯು ಉತ್ತಮ ಕಸುಬು ಅಲ್ಲ.
ಪ್ರಣವಾನಂದ ಸ್ವಾಮಿ ವೃಥಾ ಈ ಕಸುಬಿನ ಬಗ್ಗೆ ವಿಷಯವನ್ನು ಎತ್ತಿಕೊಂಡು ಬಿಲ್ಲವ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.
ಮೂರ್ತೆದಾರಿಕೆ ಕಸುಬು ನಡೆಸುತ್ತಾ ಬಂದವರಿಗೆ ಶಿಕ್ಷಣ ನೀಡಿ ಪರ್ಯಾಯ ಉದ್ಯೋಗಾವಕಾಶ ಕಲ್ಪಿಸ ಬೇಕಾಗಿದೆ ಎಂದರು.