ಮಂಗಳೂರು: ಇಂದು ಬೆಳಿಗ್ಗೆ ಎಸ್‌ಡಿಪಿಐ ಮತ್ತು ಪಿಎಫ್‌ಐ ನಾಯಕರ ಮನೆ ಹಾಗೂ ಕಚೇರಿ ಮೇಲಿನ ಎನ್‌ಐಎ ದಾಳಿಯನ್ನು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 3.30ರಿಂದ ಅಕ್ರಮವಾಗಿ ಪಕ್ಷದ ಕಚೇರಿಗೆ, ಮನೆಗಳಿಗೆ ನುಗ್ಗಿ ದಾಂಧಲೆ ಮಾಡಿ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಹೋಗಿದ್ದಾರೆ.
ನಮ್ಮ ಕಚೇರಿಗೆ ಬರುವ ಆದೇಶ ಅವರ ಬಳಿ ಇರಲಿಲ್ಲ. ಇದು ಅಕ್ರಮ ದಾಳಿಯಾಗಿದೆ. ಕಟ್ಟಡದ ಅಗ್ರಿಮೆಂಟ್ ಕಾಪಿ, ನಾವು ಮಾಡಿದ ಕಾರ್ಯಕ್ರಮದ ಫೈಲ್, ಫೋಟೋ ಆಲ್ಬಂ, ಲ್ಯಾಪ್‌ಟಾಪ್ ಕೊಂಡು ಹೋಗಿದ್ದಾರೆ ಬಿಟ್ಟರೆ ಇನ್ನೇನೂ ಸಿಕ್ಕಿಲ್ಲ. ಎನ್‌ಐಎ ಅಕ್ರಮ ಪ್ರವೇಶವನ್ನು ನಾವು ಖಂಡಿಸಿ, ಉನ್ನತ ಮಟ್ಟದ ಹೋರಾಟ ಮಾಡಲು ಯೋಚಿಸುತ್ತಿದ್ದೇವೆ.
ಪಿಎಫ್‌ಐ ಒಂದು ಸಾಮಾಜಿಕ ಸಂಘಟನೆಯಾಗಿದೆ. ಅಕ್ರಮವಾಗಿ ಬಂಧಿಸಿದ ನಮ್ಮ ಪಕ್ಷದ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದೇ ಹೋದಲ್ಲಿ ನಾವು ರಾಜ್ಯದಾದ್ಯಂತ ಹೋರಾಟ ಮಾಡಲಿದ್ದೇವೆ ಎಂದರು.
ಇದು ರಾಜಕೀಯ ಪ್ರೇರೇಪಿತವಾದ ದಾಳಿ ಎಂದ ಅವರು ನಮ್ಮ ಪಕ್ಷದ ಏಳಿಗೆಯನ್ನು ಸಹಿಸದೇ ಮಟ್ಟ ಹಾಕಲು ದಾಳಿ ಆಯೋಜಿಸಲಾಗಿದೆ.
ಜನಸಾಮಾನ್ಯರ ನೋವಿಗೆ ಸ್ಪಂದಿಸದ ಬಿಜೆಪಿ ಇಂತಹ ದಾಳಿಗಳನ್ನು ಆಯೋಜಿಸುವ ಮೂಲಕ ಇಲ್ಲಿನ ಸಮಸ್ಯೆಗಳನ್ನು ಮರೆಮಾಚಲು ಯತ್ನಿಸಿದೆ.
ಮುಂದಿನ 24 ಗಂಟೆಯೊಳಗೆ ನೀವು ಬಂಧನ ಮಾಡಿರುವ ನಮ್ಮ ನಾಯಕರನ್ನು ಬಿಡುಗಡೆ ಮಾಡಬೇಕು ಇಲ್ಲದೇ ಹೋದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಲೀಲ್ ಕೃಷ್ಣಾಪುರ ಮೊದಲಾದವರಿದ್ದರು.