ಬೆಳಗಾವಿ: ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಜಾಸ್ತಿ ಬೆಳಕಿಗೆ ಬರುತ್ತಿದ್ದು, ಅದನ್ನ ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಬೈಂದೂರು ಶೆಟ್ಟಿ ಮಾತನಾಡಿ, ಉಡುಪಿ-ದ.ಕ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದೆ. 2019ರಲ್ಲಿ 203 ಪ್ರಕರಣ, 2020ರಲ್ಲಿ 250 ಪ್ರಕರಣ ದಾಖಲಾಗಿದೆ. ಶಾಲಾ-ಕಾಲೇಜು ಕ್ಯಾಂಪಸ್ಸಿನಲ್ಲಿಯೇ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಅರಗ ಜ್ಞಾನೇಂದ್ರ ಪ್ರತೀ ಮೂರು ತಿಂಗಳಿಗೊಮ್ಮೆ ಪೊಲೀಸರು ಟನ್‌ಗಟ್ಟಲೇ ಗಾಂಜಾ ಹಿಡಿದು ಸುಡುತ್ತಿದ್ದಾರೆ. ಹೆಚ್ಚಾಗಿ ಯುವಜನರು ಇದಕ್ಕೆ ಅಡಿಕ್ಟ್ ಆಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಇದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಪೊಲೀಸ್ ಬೀಟ್ ವ್ಯವಸ್ಥೆ, ಗೂಂಡಾ ಕಾಯಿದೆ ಹಾಕಲು ಸಿದ್ದತೆ ನಡೆಸುತ್ತಿದ್ದೇವೆ ಎಂದು ಗೃಹಸಚಿವರು ಹೇಳಿದ್ದಾರೆ.