ಚಿಕ್ಕಮಗಳೂರಿನಲ್ಲಿ ಅಕ್ರಮ ದನ ಸಾಗಾಟಗಾರರ ಮೇಲೆ ಪೊಲೀಸ್ ಫೈರಿಂಗ್ : ಪೊಲೀಸ್ ಗಂಭೀರ ಗಾಯ..!
ಚಿಕ್ಕಮಗಳೂರು : ಕಳ್ಳತನ ಮಾಡಿದ್ದ ಕರುವೊಂದನ್ನು ಇನ್ನೋವಾ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳಿಗೆ ಕಾರು ನಿಲ್ಲಿಸಲು ಹೇಳಿದ್ದಕ್ಕೆ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಪ್ರಯತ್ನಿಸಿದ್ದರಿಂದ ಪೊಲೀಸರು ದನಗಳ್ಳರ ಮೇಲೆ ಐದು ಸುತ್ತು ಗುಂಡು ಹಾರಿಸಿದ ಘಟನೆ ಚಿಕ್ಕಮಗಳೂರು ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಳ್ಳೆಬೀರನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ, ಸಂತವೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ದನಗಳ್ಳತನ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ಗುರುವಾರ ರಾತ್ರಿ ದನಗಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಸ್ಥಳೀಯ ಗ್ರಾಮಸ್ಥರು ಹಾಗೂ ಲಿಂಗದಹಳ್ಳಿ ಪೊಲೀಸರ ತಂಡ ದನಗಳ್ಳರಿಗಾಗಿ ಗುರುವಾರ ರಾತ್ರಿ ಕಾದು ಕುಳಿತ್ತಿದ್ದರು. ತಡರಾತ್ರಿ 2ರ ಸಮಯದಲ್ಲಿ ಇನ್ನೋವಾದಲ್ಲಿ ಕರುವೊಂದನ್ನು ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಲು ಹೇಳಿದ್ದಾರೆ ಎನ್ನಲಾಗಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ದನಗಳ್ಳರು ಅರಣ್ಯದೊಳಗೆ ಕಾರನ್ನು ನುಗ್ಗಿಸುತ್ತಿದ್ದಂತೆ ಲಿಂಗದಹಳ್ಳಿ ಪೊಲೀಸ್ ಠಾಣೆ ಪಿಎಎಸ್ಸೈ ರಪೀಕ್ ಕಾರಿನ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಕಾರಿನಲ್ಲಿದ್ದ ಮೂವರು ದನಗಳ್ಳರು ತಪ್ಪಿಸಿಕೊಂಡು ಅರಣ್ಯದೊಳಗೆ ಓಡಿ ತಲೆಮರೆಸಿಕೊಂಡಿದ್ದಾರೆ.
ಗುಂಡಿನ ದಾಳಿಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ತಪ್ಪಿಸಿಕೊಂಡ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗಾಯಗೊಂಡಿರುವ ಲಿಂಗದಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಡಿ.ಎಸ್.ಆನಂದ್ ಹಿರೇಗೊಂಡ ಮಿಣಿಕಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ನೋಂದಣಿ ಹೊಂದಿರುವ ವಾಹನದಲ್ಲಿ ಮಂಗಳೂರು ಮೂಲದ ಆರೋಪಿಗಳು ಇದ್ದರು ಎಂದು ಶಂಕಿಸಲಾಗಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ದನಗಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಶೃಂಗೇರಿ ತಾಲೂಕಿನಲ್ಲಿ ದನಗಳ್ಳತನ ಪ್ರಕರಣ ದೊಡ್ಡ ಸದ್ದು ಮಾಡಿತ್ತು.
ದನಗಳ ಕಳ್ಳತನಕ್ಕೆ ಐಷಾರಾಮಿ ಕಾರುಗಳನ್ನು ಬಳಕೆ ಮಾಡುತ್ತಿರುವ ದೊಡ್ಡ ಜಾಲವೊಂದು ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು, ಈ ಜಾಲವನ್ನು ಭೇದಿಸಿ ಬಂಧಿಸುಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.