ಶಿವಮೊಗ್ಗ : ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಾಗಾರಿ ಬಹುತೇಲ ಪೂರ್ಣಗೊಳ್ಳಲಿದ್ದು ಫೆಬ್ರವರಿ 12ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ಯೋಜನೆ ರೂಪಿಸಲಾಗಿದೆ. ಮುಂದಿನ ದಿನದಲ್ಲಿ ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.
2006-08ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು.
ಇದಕ್ಕೆಂದು ಶಿವಮೊಗ್ಗ ಸಮೀಪದ ಸೋಗಾನೆ ಬಳಿ ವಿಮಾನ ನಿಲ್ದಾಣ ಕಾಮಗಾರಿ ಮಾಡಬೇಕು ಎಂಬ ತಿರ್ಮಾನ ಸಹ ಮಾಡಲಾಗಿತ್ತು.
ನಂತರದಲ್ಲಿ ಯಡಿಯೂರಪ್ಪ ಸಿಎಂ ಆದ ಮೇಲೆ 2008 ರಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರೆವೇರಿಸಿದ್ದರು.
12 ವರ್ಷಗಳು ಕಳೆಯತ್ತಾ ಬಂದರೂ ಇನ್ನು ವಿಮಾನ ನಿಲ್ದಾಣ ಸಿದ್ಧವಾಗಿಲ್ಲ.
2008 ರಲ್ಲಿ ಭರದಿಂದಲೇ ಕಾಮಗಾರಿ ಸಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಇನ್ನೇನು ಒಂದೆರಡು ವರ್ಷದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ವಿಮಾನ ಹಾರಾಟ ನಡೆಸಲಿವೆ ಎಂದು ಜನರು ಭಾವಿಸಿದ್ದರು.
ಅದರೆ, ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿದ ನಂತರ ವಿಮಾನ ನಿಲ್ದಾಣ ಕಾಮಗಾರಿ ವೇಗಕ್ಕೆ ಕಡಿವಾಣ ಬಿತ್ತು. ಹಲವಾರು ಕಾರಣಗಳಿಂದ ನಂತರದಲ್ಲಿ ಕಾಮಗಾರಿ ಸಂಪೂರ್ಣವಾಗಿ ನಿಂತೇ ಹೋಯಿತು.
ಇದೀಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ಚಾಲನೆ ನೀಡಿದ್ದರು.
ತಾವು ಚಾಲನೆ ನೀಡಿದ್ದ ಕಾಮಗಾರಿ ಪೂರ್ಣಗೊಳಿಸಬೇಕು, ತವರು ಜಿಲ್ಲೆಗೆ ವಿಮಾನ ನಿಲ್ದಾಣ ಆಗಬೇಕು ಎಂಬ ಉದ್ದೇಶದಿಂದ ಈಗ ಮತ್ತೇ ಕಾಮಗಾರಿಗೆ ಚಾಲನೆ ಕೊಟ್ಟಿದ್ದರು.
ವಿಮಾನ ನಿಲ್ದಾಣ ಯೋಜನೆಗಾಗಿ 200 ಕೋಟಿ ಹಣ ಸಹ ಮೀಸಲಿಟ್ಟಿದ್ದರು. ಅವರ ಆಶಯದಂತೆ ಇದೀಗ ತವರು ಜಿಲ್ಲೆಯಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.