ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್ನ ಅಹಮದಾಬಾದ್ನಲ್ಲಿ ಇಂದು ಶುಕ್ರವಾರ ಮುಂಜಾನೆ ನಿಧನರಾದರು.
ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್ನ ಅಹಮದಾಬಾದ್ನಲ್ಲಿ ಇಂದು ಶುಕ್ರವಾರ ಮುಂಜಾನೆ ನಿಧನರಾದರು.
ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ನಗರದ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದರೆ.
ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ ತಾಯಿಗೆ ಶುಭಾಶಯ ತಿಳಿಸಿ, ಆಶೀರ್ವಾದ ಪಡೆದಿದ್ದರು. ತಾಯಿಯ ಪಾದ ತೊಳೆದು ಪೂಜಿಸಿದ್ದರು.
ಹೀರಾಬೆನ್ ನಿಧನಕ್ಕೆ ಗಣ್ಯರೆಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕುಟುಂಬ ಪೋಷಣೆಗಾಗಿ ಹೀರಾಬೆನ್ ಅವರು ನಡೆಸಿದ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಅವರ ತ್ಯಾಗದ ತಪಸ್ವಿ ಜೀವನ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಈ ದುಃಖದ ಸಮಯದಲ್ಲಿ ಇಡೀ ರಾಷ್ಟ್ರವು ಪ್ರಧಾನಿ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ನಿಮ್ಮೊಂದಿಗಿದೆ. ಓಂ ಶಾಂತಿ ಎಂದು ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.
ನರೇಂದ್ರ ಮೋದಿಯವರ ತಾಯಿಯ ನಿಧನದ ಸುದ್ದಿ ಅತ್ಯಂತ ದುಃಖ ತರಿಸಿದೆ, ತಾಯಿಯ ಮರಣವು ಜೀವನದಲ್ಲಿ ಎಂದೂ ಮರೆಯಲಾಗದ ನೋವನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.