ಒಂದು ದೇಶ- ಒಂದು ಗ್ಯಾಸ್ ಗ್ರಿಡ್ ಸಾಕಾರಕ್ಕೆ ಬದ್ಧ: ಪ್ರಧಾನಿ ಮೋದಿ ಘೋಷಣೆ..!
ಬೆಂಗಳೂರು: ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರ್ಕಾರ ಕಟಿ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. .
ಅವರು ಇಂದು ಬಹು ನಿರೀಕ್ಷಿತ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಅನ್ನು ದೇಶಕ್ಕೆ ಸಮರ್ಪಿಸಿ ಮಾತನಾಡಿದರು.
ಸರ್ಕಾರ ಇಂಧನ ಪೂರೈಕೆಗೆ ಒಂದು ಸಮಗ್ರ ಯೋಜನೆಯನ್ನು ರೂಪಿಸಿದೆ ಮತ್ತು ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ ನೀಡುತ್ತಿದೆ. ಆ ಮೂಲಕ ಜನ ಸ್ನೇಹಿ ಹಾಗೂ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ.
1987 ರಿಂದ 2014 ರ ಅವಧಿಯಲ್ಲಿ ದೇಶದಲ್ಲಿ 15 ಸಾವಿರ ಕಿ.ಮೀ. ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸಲಾಗಿತ್ತು. ಆದರೆ ಕಳೆದ ಆರು ವರ್ಷಗಳ ಅವಧಿಯಲ್ಲಿ 16 ಸಾವಿರ ಕಿ.ಮೀ. ನಷ್ಟು ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸುವ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಮುಂದಿನ ನಾಲ್ಕಾರು ವರ್ಷಗಳಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಧಾನಿ ನುಡಿದರು.
ಸಾರಿಗೆ ಸಂಪರ್ಕ ಹಾಗೂ ಪರಿಸರ ಸ್ನೇಹಿ ಇಂಧನ ವಲಯದಲ್ಲಿ ಪ್ರಗತಿ ಸಾಧಿಸಿದ ದೇಶಗಳು ಅಭಿವೃದ್ಧಿ ನಕ್ಷೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಭಾರತವೂ ಅಭಿವೃದ್ಧಿಯ ಮುಂಚೂಣಿಯಲ್ಲಿರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಒಂದು ದೇಶ ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯು ಪೂರ್ಣಪ್ರಮಾಣದಲ್ಲಿ ಸಾಕಾರಗೊಂಡಾಗ ರಸಗೊಬ್ಬರ, ರಾಸಾಯನಿಕ, ಪೆಟ್ರೋಲಿಯಂ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ.
ಬಡ, ಮಧ್ಯಮ ವರ್ಗದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಸಾವಿರಾರು ಕೋಟಿ ವಿದೇಶಿ ವಿನಿಮಯ ಮೊತ್ತ ಉಳಿತಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆ ಶೇ 6.3 ರಷ್ಟಿದ್ದು, 2030ರ ವೇಳೆಗೆ ಇದನ್ನು ಶೇ. 15ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೊಚ್ಚಿ-ಮಂಗಳೂರು ಪೈಪ್ ಲೈನ್ ನಿಂದ ಈ ಭಾಗದ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗಲಿದೆ.
ಜೊತೆಗೆ ವಾಹನಗಳಲ್ಲಿ ಸಿ ಎನ್ ಜಿ ಬಳಕೆಗೂ ಉತ್ತೇಜನ ದೊರೆಯಲಿದೆ. ಈ ವ್ಯಾಪ್ತಿಯಲ್ಲಿ ಸುಮಾರು 700 ಸಿಎನ್ ಜಿ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಯೋಜನೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಭಾಗದಲ್ಲಿ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುವುದು, ಅಲ್ಲದೆ, ವಾಣಿಜ್ಯ ಚಟುವಟಿಕೆಗಳಿಗೆ, ಉದ್ದಿಮೆಗಳಿಗೆ, ವಿಶೇಷವಾಗಿ ಎಂ.ಸಿ.ಎಫ್ ಹಾಗೂ ಎಂ.ಆರ್. ಪಿ.ಎಲ್ ಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಧಾಬೋಲ್-ಬೆಂಗಳೂರು ಅನಿಲ್ ಪೈಪ್ ಲೈನ್ ಯೋಜನೆ ಈಗಾಗಲೇ ಕಾರ್ಯಗತವಾಗಿದ್ದು, ಬೆಂಗಳೂರು ನಗರವೊಂದರಲ್ಲೇ 25 ಸಾವಿರ ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುತ್ತಿದೆ.
ಸುಮಾರು 2.8 ಲಕ್ಷಕ್ಕೂ ಹೆಚ್ಚು ಜನರು ನೈಸರ್ಗಿಕ ಅನಿಲ ಸಂಪರ್ಕ ಕೋರಿ ನೋಂದಾಯಿಸಿಕೊಂಡಿದ್ದು, 1.68 ಲಕ್ಷ ಮನೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ನೈಸರ್ಗಿಕ ಅನಿಲ ಬಳಕೆ ಪ್ರಮಾಣ ಹೆಚ್ಚಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು. ಹಲವು ಸವಾಲುಗಳ ನಡುವೆಯೂ ಯೋಜನೆಯನ್ನು ಪೂರ್ಣಗೊಳಿಸಿದ ಪ್ರಧಾನ ಮಂತ್ರಿಯವರ ದೃಢಸಂಕಲ್ಪವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಸಮಾರಂಭದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಹಲವು ಅಡೆತಡೆಗಳ ನಡುವೆಯೂ ಪೂರ್ಣಗೊಂಡ ಈ ಯೋಜನೆಯಿಂದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಮತ್ತು ಇತರ ಗಣ್ಯರು ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.