ಬರ್ಲಿನ್: ಯುರೋಪ್‌ನ ಮೂರು ರಾಷ್ಟ್ರಗಳ ಪ್ರವಾಸದ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ಇಂದು ಜರ್ಮನಿಗೆ ತಲುಪಿದ್ದಾರೆ.
ಮೇ 2ರಿಂದ ಮೇ 4ರವರೆಗೆ ಮೂರು ದಿನ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಪ್ರವಾಸ ಪೂರ್ಣಗೊಳಿಸಲಿದ್ದಾರೆ. ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ತಲಾ ಒಂದು ರಾತ್ರಿ ಕಳೆಯುವ ಪ್ರಧಾನಿ, ಎರಡು ರಾತ್ರಿಗಳನ್ನು ವಿಮಾನದಲ್ಲಿ ಕಳೆಯುವರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಸೇರಿದಂತೆ ಹಲವು ಗಣ್ಯರ ಜತೆಗೆ ಪ್ರಧಾನಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಮೇ 3–4 ರಂದು ನಡೆಯುವ ದ್ವಿಪಕ್ಷೀಯ ಮಾತುಕತೆಯಲ್ಲಿ ಹಾಗೂ ಭಾರತ-ನಾರ್ಡಿಕ್ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ವರ್ಷದ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ 65 ತಾಸುಗಳ ಈ ಪ್ರವಾಸದಲ್ಲಿ ಮೂರು ದೇಶಗಳಿಗೆ ಅವರು ಭೇಟಿ ನೀಡಲಿದ್ದು, 25 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.