ಪುತ್ತೂರು: ಮೈಸೂರಿನ ಛಾಯಾಗ್ರಾಹಕ, ಮಂಗಳೂರು ಮೂಲದ ಫೋಟೋಗ್ರಾಫರ್ ಜಗದೀಶ್ (58) ಅವರನ್ನು ಹತ್ಯೆ ಮಾಡಿ ಹೂತು
ಹಾಕಿದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈ ಪ್ರಕರಣದಲ್ಲಿ ಇದೀಗ 5ನೇ ಆರೋಪಿ ಬಂಧನವಾಗಿದೆ.
ಜಯರಾಜ್ ಶೆಟ್ಟಿ ಅಣಿಲೆ
ಜಮೀನು ವಿಚಾರಲ್ಲಿ ಜಗದೀಶ್ ಜತೆ ತಕರಾರು ಹೊಂದಿದ್ದ ಆರೋಪಿಗಳು ಜಗದೀಶ್ರನ್ನು ದೂರ ಮಾಡಲು ಯೋಚಿಸಿದ್ದರೂ, ಕೊಲೆ ಹೇಗೆ ಮಾಡಬೇಕೆಂಬ ಬಗ್ಗೆ ಮಾಸ್ಟರ್ ಪ್ಲಾನ್ ಕೊಟ್ಟಿದ್ದೇ ಬೇರೆ ವ್ಯಕ್ತಿ ಎನ್ನಲಾಗುತ್ತಿದೆ.
ಈಗಾಗಲೇ ಬಂಧಿತರಾದ ಈಶ್ವರ ಮಂಗಲದ ಪಟ್ಲಡ್ಕ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ, ಪುತ್ರ ಪ್ರಶಾಂತ್ ರೈ ಹಾಗೂ ನೆರೆಮನೆಯ ಜೀವನ ಪ್ರಸಾದ್ರನ್ನು ನ.30ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಸುಬ್ಬಯ್ಯ ರೈ ಪತ್ನಿ ಜಯಲಕ್ಷ್ಮೀ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೊಲೆಯಾದ ಜಗದೀಶ್
ಇದೀಗ ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ 5ನೇ ಆರೋಪಿ ಜಯರಾಜ್ ಶೆಟ್ಟಿ ಅಣಿಲೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. 10 ವರ್ಷದ ಹಿಂದೆ ಉಮೇಶ್ ರೈ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಜಯರಾಜ್ ಶೆಟ್ಟಿ ಬಳಿಕ ಖುಲಾಸೆಗೊಂಡಿದ್ದನು.
ಉಮೇಶ್ ರೈ ಹತ್ಯೆ ಮಾದರಿ
11 ವರ್ಷ ಹಿಂದೆ ಕರಾವಳಿಯನ್ನು ತಲ್ಲಣಗೊಳಿಸಿದ್ದ ತಿಂಗಳಾಡಿ ಸಮೀಪದ ಕಲ್ಲುಗುಡ್ಡೆ ಉಮೇಶ್ ರೈ ಹತ್ಯಾ ಪ್ರಕರಣದ ಮಾದರಿಯಲ್ಲೇ ಜಗದೀಶ್ ಕೊಲೆ ನಡೆದಿದೆ. ಉಮೇಶ್ ರೈ ಕೊಲೆ ಬಡಗನ್ನೂರು ಗ್ರಾಮದಲ್ಲಿ ನಡೆದಿದ್ದು, ಅದರ ಪಕ್ಕದ ಗ್ರಾಮದಲ್ಲಿ ಜಗದೀಶ್ ಕೊಲೆ ನಡೆದಿದೆ.
18 ಪ್ರಕರಣ ಎದುರಿಸುತ್ತಿದ್ದ ರೌಡಿಶೀಟರ್ ಕಲ್ಲುಗುಡ್ಡ ಉಮೇಶ್ ರೈ, ರಾಜ್ಯದ ಪ್ರತಿಷ್ಠಿತ ಉದ್ಯಮಿಯೊಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ ಎಂಬ ಸಂಶಯದ ಮೇಲೆ 2010 ರ ಮಾರ್ಚ್ 27 ರಂದು ಕೊಲೆ ಮಾಡಲಾಗಿತ್ತು.
ಪರಿಚಯಸ್ಥನಾದ ಉಮೇಶ್ ರೈಯನ್ನು ಆರೋಪಿಗಳು ಮನೆಗೆ ಕರೆಸಿಕೊಂಡಿದ್ದು, ಭರ್ಜರಿ ಭೋಜನ ಉಣ ಬಡಿಸಿದ ಮೇಲೆ ಕೂತಲ್ಲಿಗೇ ಸುತ್ತಿಗೆಯಲ್ಲಿ ಬಡಿದು ಕೊಲೆ ಮಾಡಿ, ಶವವನ್ನು ಉಮೇಶ್ ಕಾರಲ್ಲೇ ಕೊಂಡೊಯ್ದು ಹೂತು ಹಾಕಿ ಕಾರನ್ನು ಗಡಿಯಾಚೆ ಇಟ್ಟು ಬರಲಾಗಿತ್ತು.
ಮಾ.26ರಂದು ಪುತ್ತೂರು ಪಡೀಲ್ನ ಮನೆಯಿಂದ ಹೊರಟಿದ್ದ ಉಮೇಶ್ ಮಾ.27ರಂದು ಕರೆ ಮಾಡಿ ಗೆಳೆಯನ ಮನೆಯಲ್ಲೇ ಇರುವುದಾಗಿ ತಿಳಿಸಿದರು.
ಬಳಿಕ ನಾಪತ್ತೆಯಾಗಿದ್ದರು. ಆರೋಪಿಗಳ ಪೈಕಿ ಒಬ್ಬಾತ ಉಮೇಶ್ ಪತ್ನಿಗೆ ಮಾ.30ರಂದು ಕರೆ ಮಾಡಿ, ನಿನ್ನ ಗಂಡನನ್ನು ಬೆಳಗಾವಿ ಪೊಲೀಸರು ಕರೆದೊಯ್ದಿದ್ದಾರೆ ಎಂದಿದ್ದ.
ತಿಂಗಳ ಬಳಿಕ ಕಾರು ಪತ್ತೆಯಾಗಿತ್ತು. ಅಂತಿಮವಾಗಿ ಪೊಲೀಸರು 2010ರ ಸೆ.23ರಂದು ಆರೋಪಿಗಳನ್ನು ಬಂಧಿಸಿದ್ದರು.
ಪ್ರಸ್ತುತ ಇದೇ ಮಾದರಿಯಲ್ಲಿ ಜಗದೀಶ್ ಹತ್ಯೆ ನಡೆದಿದೆ.
ವಿಶ್ವಾಸದಿಂದ ಬರಮಾಡಿಕೊಂಡು, ಮನೆಯಲ್ಲಿ ಊಟ ಮಾಡಿಸಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪಕ್ಕದ ಗುಡ್ಡದಲ್ಲಿ ಗುಂಡಿ ತೋಡಿ ಹೂತಿದ್ದಾರೆ. ‘ಉಮೇಶ್ ರೈ ಕೊಲೆ ಪ್ರಕರಣದಲ್ಲಿ ಐಡಿಯಾ ಕೊಟ್ಟ ವ್ಯಕ್ತಿಯೇ ಇಲ್ಲೂ ಮಾಸ್ಟರ್ ಪ್ಲಾನ್ ರೂಪಿಸಿದ್ದನೇ ಎಂಬ ಗುಮಾನಿ ಪೊಲೀಸರದ್ದು.