ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ದರ ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವ ಮಧ್ಯೆ ದೇಶದಲ್ಲಿ ಇಂಧನ ದರ ಇಂದು ಮತ್ತೆ ಏರಿಕೆಯಾಗಿದೆ. ಇದರ ಜೊತೆಗೆ ಅಡುಗೆ ಅನಿಲ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಇಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 36 ಪೈಸೆ ಏರಿಕೆಯಾದರೆ, ಡೀಸೆಲ್‌ಗೆ 38 ಪೈಸೆ ಏರಿಕೆಯಾಗಿದೆ. ಆ ಮೂಲಕ ಮತ್ತೊಮ್ಮೆ ತೈಲ ದರದಲ್ಲಿ ಏರಿಕೆ ಕಂಡಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ 111.95, ಡೀಸೆಲ್ ದರ 102.83 ಆಗಿದೆ.
ಅಡುಗೆ ಅನಿಲ ದರ ಏರಿಕೆ ನಿಚ್ಚಳ
ದೀಪಾವಳಿಗೂ ಮುನ್ನವೇ ಅಡುಗೆ ಅನಿಲ ದರ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ತೈಲ ಕಂಪನಿಗಳು ಎಲ್‌ಪಿಜಿ ಪೂರ್ಣ ಪ್ರಮಾಣದ ದರ ಏರಿಕೆಯನ್ನು ತಡೆ ಹಿಡಿದಿದ್ದು, ಸರಕಾರದ ಅನುಮತಿಸಿದರೆ ನ.1ಕ್ಕೆ ಏರಿಕೆ ಪ್ರಕಟಿಸುವ ಸಾಧ್ಯತೆಯಿದೆ.
ಈ ಏರಿಕೆಯೊಂದಿಗೆ ವರ್ಷದಲ್ಲಿ 5ನೇ ಬಾರಿ ಎಲ್‌ಪಿಜಿ ದರ ಹೆಚ್ಚಳವಾದಂತಾಗಲಿದೆ. ಕಳೆದ ಜುಲೈನಿಂದ ಗೃಹ ಬಳಕೆ ಸಿಲಿಂಡರ್ ದರ 90 ರೂ. ಹೆಚ್ಚಳವಾಗಿದ್ದು, 900 ರೂ. ದಾಟಿದೆ. ಸದ್ಯದಲ್ಲೇ 1,000ಗೆ ತಲುಪಿದರೆ ಅಚ್ಚರಿಯಿಲ್ಲ.