ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ನಿವಾಸಿ ಹಾಗೂ ಬಹುಜನ ಚಳುವಳಿಯ ಹಿರಿಯ ನೇತಾರ ಪಿ. ಡೀಕಯ್ಯ (63) ಅವರ ಅಸಹಜ ಸಾವು ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಲು ಹಾಗೂ ಅಪರಾಧಿಗಳನ್ನು ತಕ್ಷಣ ಬಂಧಿಸಲು ಜಿಲ್ಲೆಯ ಜನಪರ ಸಂಘಟನೆಗಳು ಪೊಲೀಸ್ ಅಧೀಕ್ಷಕರಲ್ಲಿ ಇಂದು ಮನವಿಯನ್ನು ಮಾಡಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನಪರ ಸಂಘಟನೆಗಳ ಪ್ರತಿನಿಧಿಗಳು ‘ಬಹುಜನ ಚಳುವಳಿಯ ನೇತಾರ ಹಾಗೂ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ಪಿ. ಡೀಕಯ್ಯ (೬೩) ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಡೀಕಯ್ಯ ಅವರ ತಾಯಿ ಕುಟುಂಬದ ಸದಸ್ಯರು ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ದೂರಿನ ಆಧಾರದಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಮತ್ತು ಪೊಲೀಸರ ಸಮಕ್ಷಮದಲ್ಲಿ ಡೀಕಯ್ಯ ಅವರ ಮೃತ ದೇಹವನ್ನು ಮಣ್ಣಿನಿಂದ ಹೊರ ತೆಗೆದು ವೈದ್ಯರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದಲ್ಲದೆ, ರಕ್ತದ ಮಡುವಿನಲ್ಲಿದ್ದ ಡೀಕಯ್ಯ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿಕೊಂಡಿರುವ ಮತ್ತು ಅವರ ತಲೆ ಬುರುಡೆ ಹಲವೆಡೆ ಒಡೆದಿರುವುದನ್ನು ಸಿ.ಟಿ. ಸ್ಕ್ಯಾನ್ ಮೂಲಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಕಂಡುಕೊಂಡಿದ್ದಾರೆ.
ಡೀಕಯ್ಯ ಅವರು ನಿಧನರಾದ ಬಳಿಕ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸದೇ ಇರುವುದು ಮತ್ತು ಸಂಬಂಧಪಟ್ಟ ವೈದ್ಯರನ್ನು ಕಸ್ತೂರ್ಬಾ ಆಸ್ಪತ್ರೆಯಲ್ಲೇ ಭೇಟಿ ಮಾಡಿ ಡೀಕಯ್ಯ ಅವರ ಸಾವಿನ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಪ್ರಯತ್ನಿಸಿದಾಗ, ಆ ವೈದ್ಯರು ವಿನಾಕಾರಣ ಸಿಟ್ಟುಗೊಂಡಿದ್ದಲ್ಲದೆ, ಯಾವುದೇ ಸ್ಪಷ್ಟನೆಯನ್ನು ನೀಡಲು ನಿರಾಕರಿಸಿದ್ದಾರೆ ಎಂಬ ಡೀಕಯ್ಯ ಅವರ ತಾಯಿ ಕುಟುಂಬದ ಸದಸ್ಯರ ಆಪಾದನೆಯು ಅತ್ಯಂತ ಗಂಭೀರ ಚಿಂತೆಯ ಹಾಗೂ ಆತಂಕಕಾರಿ ವಿಚಾರವಾಗಿದೆ.
ಇದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಡೀಕಯ್ಯ ಅವರ ಸಾವಿನ ಬಗ್ಗೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮತ್ತು ಆಸ್ಪತ್ರೆಯ ಸಂಬಂಧಪಟ್ಟ ವೈದ್ಯರ ಕಾನೂನು ವಿರೋಧಿ ನಡವಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಿ, ಅವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು, ಆ ಮೂಲಕ ಡೀಕಯ್ಯ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲೆಯ ಶೋಷಿತ ಸಮುದಾಯಗಳ ಪರವಾಗಿ ಜನಪರ ಸಂಘಟನೆ ಆಗ್ರಹಿಸಿದೆ.