ಮಂಗಳೂರು: ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಭಾವನಾತ್ಮಕವಾಗಿ ಬಳೆಸಿಕೊಂಡು ಬಿಜೆಪಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದಾರೆ. ಸಿಬಿಐ ವರದಿ ಸಲ್ಲಿಕೆ ಬಳಿಕ ಅವರ ಕೋಮು ಅಜೆಂಡಾ ಬಯಲಾಗಿದೆ ಎಂದು ವಿಪಕ್ಷ ಉಪನಾಯಕ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್ ಅವರು ಪರೇಶ ಮೇಸ್ತ ಸಾವಿನ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದೆ.
ಅವರ ತನಿಖಾ ವರದಿ ಬಿಜೆಪಿಯವರು ಸಾವಿನ ಮನೆಯಲ್ಲೂ ರಾಜಕೀಯ ಮಾಡುವುದನ್ನು ಬಯಲು ಮಾಡಿದೆ. ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಆ ಕುಟುಂಬವನ್ನು ರಸ್ತೆಗೆ ಚರ್ಚೆಗಿಳಿಸುವಂತೆ ಮಾಡುವುದು,
ಮಕ್ಕಳನ್ನು ಕಳೆದುಕೊಂಡವರಿಗೆ ಆರ್ಥಿಕ ಶಕ್ತಿ ಕೊಡುವ ಯೋಚನೆ ಬಿಟ್ಟು ಅವರು ರಾಜಕೀಯವಾಗಿ ಲಾಭ ಪಡೆದುಕೊಂಡು ಮರೆಯುತ್ತಿರುವುದು ಇದು ಬಿಜೆಪಿಯವರ ರಾಜಕೀಯದ ಚುನಾವಣಾ ಒಂದು ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೇಶ ಮೇಸ್ತ ನಿಗೂಢವಾಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಬಿಜೆಪಿ ಇಲ್ಲಸಲ್ಲದ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಿ ರಾಜಕೀಯವಾಗಿ ಲಾಭ ಪಡೆದರು.
ಸಾವನ್ನು ಧರ್ಮಾಧಾರಿತವಾಗಿ ಮಾಡಿ, ಕೋಮುಗಲಭೆಗೆ ಕುಮ್ಮಕ್ಕು ನೀಡಿ, ಸಾರ್ವಜನಿಕರ ಆಸ್ತಿಯನ್ನು ನಷ್ಟವನ್ನು ಉಂಟು ಮಾಡಿದ್ದು ಬಿಜೆಪಿಯವರ ರಾಜಕೀಯದ ಷಡ್ಯಂತ್ರ ಈಗ ಬಯಲಾಗಿದೆ ಎಂದರು.