ಕುಂದಾಪುರ: ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೀಡಾದ ಸಣ್ಣಪುಟ್ಟ ರೈತರಿಗೆ ಈ ಹೊಸ ಉದ್ಯಮ ಆಶಾದೀಪವಾಗುವ ಲಕ್ಷಣ ಗೋಚರಿಸುತ್ತಿದ್ದು, ಅದರಂತೆ ತಾಲೂಕಿನ ಜಪ್ತಿ ಎಂಬಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. 14 ಯುವಕರಿಗೆ 45 ದಿನದ ತರಬೇತಿ ಈಗಾಗಲೇ ನೀಡಲಾಗಿದೆ. ತೆಂಗಿನ ಮರ ಹತ್ತುವುದು, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವುದು, ದಿನಕ್ಕೇರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ. ಜುಲೈ ಮೊದಲ ವಾರದಲ್ಲಿ ಅಧಿಕೃತವಾಗಿ ಕಲ್ಪರಸ ಸಿಗುವ ಔಟ್ ಲೆಟ್ಗಳು ಆರಂಭವಾಗಿಲಿದೆ ಎಂದು ಉ.ಕಾ.ಸ ಸಂಸ್ಥೆಯ ನಿರ್ದೇಶಕರಾದ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.
ರೈತರೇ ಸೇರಿಕೊಂಡು ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಭಾರತೀಯ ಕಿಸಾನ್ ಸಂಘ ನೇತೃತ್ವದಲ್ಲಿ ಉ.ಕಾ.ಸ ಎಂಬ ಸಂಸ್ಥೆಯನ್ನು ಕಲ್ಪರಸ ಮಾರುಕಟ್ಟೆ ನಿರ್ವಹಣೆಗಂತಲೇ ಹುಟ್ಟುಹಾಕಿದ್ದು, ಯುವ ಜನಾಂಗವನ್ನು ಈ ಉದ್ಯಮಕ್ಕೆ ಆಕರ್ಷಿಸಲಾಗುತ್ತಿದೆ. ಸದ್ಯ ಉಡುಪಿ ಜಿಲ್ಲೆಯಲ್ಲಿ 1,028 ರೈತರು ಸಂಸ್ಥೆಗೆ ಶೇರುದಾರರಾಗಿದ್ದು, ಮುಂದಿನ 5 ವರ್ಷದಲ್ಲಿ 5 ಸಾವಿರ ಕುಟುಂಬ ಸೇರ್ಪಡೆಯಾಗಲಿದೆ.
ಒಂದು ರೈತ ಕುಟುಂಬಕ್ಕೆ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಸಂಗ್ರಹಿಸುವ ಅವಕಾಶವಿದೆ. ಒಂದು ಮರದಿಂದ ಪ್ರತಿದಿನ 2 ಲೀಟರ್ ಸಿಹಿ ರಸ ಇಳಿಯಲಿದೆ. ವರ್ಷಕ್ಕೆ 8 ಮರದಿಂದ 5,000 ಲೀಟರ್ ರಸ ಇಳಿದರೆ ವಾರ್ಷಿಕ ಸುಮಾರು 1 ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಕಲ್ಪರಸ ತೆಗೆಯುವ ತಜ್ಞ ಯುವಕರು ಲೀಟರ್ಗೆ 25 ರೂಪಾಯಿ, ಪಿಎಫ್, ಇಎಸ್ಐ ಸೌಲಭ್ಯ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.