ಮಂಗಳೂರು / ಬೆಂಗಳೂರು : ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಆನೇಕಲ್ ಬಳಿಯ ಜಿಗಣಿಯಲ್ಲಿ ವಾಸವಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಗಣಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ ಎನ್ಐಎ ಅಧಿಕಾರಿಗಳು ಜಿಗಣಿಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈಗ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪಾಕಿಸ್ತಾನದ ವ್ಯಕ್ತಿ ವಾಸ್ತವ್ಯವಿದ್ದ ವಿಚಾರ ಗೊತ್ತಾಗಿದೆ. ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ರಷೀದ್ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ, ಆಯುಷಾ ಅನಿಫ್ ಅಲಿಯಾಸ್ ಆಶಾ ಶರ್ಮಾ, ಮೊಹಮ್ಮದ್ ಹನೀಫ್ ಅಲಿಯಾಸ್ ರಾಮ್ ಬಾಬಾ ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಬಂಧಿತರು. ಹೆಸರು ಬದಲಿಸಿಕೊಂಡು ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪಾಕ್ ನಿಂದ ಬಾಂಗ್ಲಾ, ಭಾರತದತ್ತ:
ಪಾಕಿಸ್ತಾನದಲ್ಲಿದ್ದಾಗ ಧರ್ಮದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಈತ ಪಾಕಿಸ್ತಾನ ತೊರೆದಿದ್ದ. ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ಕೆಲವು ಸಮಯದವರೆಗೆ ನೆಲೆಸಿದ್ದ. ಕೊನೆಗೆ ಅಲ್ಲಿಯೇ ಒಬ್ಬ ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದ. ಇದಾದ ನಂತರ ಆತ ತನ್ನ ಹಾಗೂ ಮಕ್ಕಳೊಂದಿಗೆ ಮತ್ತೆ 2014ರಲ್ಲಿ ದೆಹಲಿಗೆ ಬಂದಿದ್ದ ಎನ್ನಲಾಗಿದೆ.
ಅಲ್ಲಿ ಕೆಲವರ ಸಹಾಯದಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮಾಡಿಸಿಕೊಂಡು, ಕುಟುಂಬದೊಂದಿಗೆ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಧರ್ಮದ ವಿಚಾರವಾಗಿಯೇ ರಷೀದ್‌ನನ್ನು ಪಾಕಿಸ್ತಾನದಿಂದ ಹೊರದಬ್ಬಲಾಗಿತ್ತು. ಬಳಿಕ ಬಾಂಗ್ಲಾದಿಂದ ನೇಪಾಳಕ್ಕೆ ಹೋಗಿದ್ದಾಗ ಅಲ್ಲಿನ ಧಾರ್ಮಿಕ ಸಂಸ್ಥೆಗೆ ಸೇರಿಕೊಂಡು, ಧರ್ಮ ಪ್ರಚಾರದಲ್ಲಿ ನಿರತನಾಗಿದ್ದ. ಅಲ್ಲಿನ ಧರ್ಮಗುರು ಸೂಚನೆ ಮೇರೆಗೆ ಧರ್ಮಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದ ಎನ್ನಲಾಗಿದೆ.
ಇದನ್ನೂ ಓದಿ : 500ರ ನೋಟಿನಲ್ಲಿ ಗಾಂಧಿ ಜಾಗದಲ್ಲಿ ನಟ ಅನುಪಮ್ ಖೇರ್..!?
ಬೆಂಗಳೂರಿಗೆ ಬಂದಿದ್ದ ರಷೀದ್ ಮೊದಲಿಗೆ ಇಬ್ಬರನ್ನು ಪರಿಚಯ ಮಾಡಿಕೊಂಡು ಅವರನ್ನೂ ಧರ್ಮ ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡಿದ್ದ. ಅವರ ಸಹಕಾರದಿಂದಲೇ ಜಿಗಣಿಯಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಂಡಿದ್ದ. ಕೊನೆಗೆ ಜಿಗಣಿಯಲ್ಲಿ ಮನೆ ಮಾಡಿಕೊಂಡು ಡೆಲಿವರಿ ಬಾಯ್ ಕೆಲಸ ಕೂಡ ಮಾಡುತ್ತಿದ್ದ. ಬಿರಿಯಾನಿ ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈತನ ಮೇಲೆ ಕಣ್ಣಿಟ್ಟು ಚಲನವಲನ ಗಮನಿಸುತ್ತಿತ್ತು. ಬಳಿಕ ಗುಪ್ತಚರ ಅಧಿಕಾರಿಗಳೇ ರಷೀದ್ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಜಿಗಣಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಕೊನೆಗೆ ಇಡೀ ಕುಟುಂಬವನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.