ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ ಸಾವರ್ಕರ್ ನಮ್ಮ ಆರಾಧ್ಯ ದೈವ, ಅವರನ್ನು ಅವಮಾನಿಸಿದರೆ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯವರು ಎಚ್ಚರಿಸಿದ್ದಾರೆ.
ಮಲೇಗಾಂವ್: ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ ಸಾವರ್ಕರ್ ನಮ್ಮ ಆರಾಧ್ಯ ದೈವ, ಅವರನ್ನು ಅವಮಾನಿಸಿದರೆ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯವರು ಎಚ್ಚರಿಸಿದ್ದಾರೆ.
ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ. ‘ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ, ಗಾಂಧಿ ಕ್ಷಮೆ ಕೇಳುವುದಿಲ್ಲ‘ ಎಂದು ಹೇಳಿದ್ದರು.
ಮಾಲೆಗಾಂವ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಾತನಾಡಿದ ಉದ್ಧವ್ ಠಾಕ್ರೆಯವರು, ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಸಾವರ್ಕರ್ ಅವರು ನಮ್ಮ ಆರಾಧ್ಯ ದೈವ. ಅವರಿಗೆ ಮಾಡುವ ಅವಮಾನ ಸಹಿಸಲು ಸಾಧ್ಯವಿಲ್ಲ. ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಎಂಬ ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯನ್ನು ಪ್ರಜಾಪ್ರಭುತ್ವವನ್ನು ರಕ್ಷಿಸಲು ರಚಿಸಲಾಗಿದೆ ಮತ್ತು ಅದಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅಗತ್ಯವಾಗಿದೆ. ಸಾವರ್ಕರ್‌ಗೆ ಅವಮಾನ ಮಾಡುವುದರಿಂದ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಿದರು.
ಸಾವರ್ಕರ್ ನಮ್ಮ ಆರಾಧ್ಯ ದೈವ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಟ್ಟಾಗಿ ಹೋರಾಡಬೇಕಾಗಿದೆ. ಆದರೆ, ಸಾವರ್ಕರ್ ಅವರ ಅವಮಾನವನ್ನು ಸಹಿಸಲಾಗುವುದಿಲ್ಲ. ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆಯನ್ನು ಅನುಭವಿಸಿದರು. ಅವರ ನೋವುಗಳನ್ನು ನಾವು ಓದಬಹುದು. ಆದರೆ, ಇದು ತ್ಯಾಗದ ರೂಪವಾಗಿದೆ ಎಂದು ತಿಳಿಸಿದರು.
”ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಅದರ ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿ ಬಂದಿದ್ದೇವೆ. ನಿಮ್ಮನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗುತ್ತಿದೆ. ಈ ಸಮಯವನ್ನು ವ್ಯರ್ಥವಾಗಲು ಬಿಟ್ಟರೆ, ಪ್ರಜಾಪ್ರಭುತ್ವವು ಅಸ್ತಿತ್ವದಲ್ಲಿಲ್ಲದಂತಾಗುತ್ತದೆ. 2024 ಕೊನೆಯ ಚುನಾವಣೆಯಾಗಲಿದೆ ಎಂದು ಹೇಳಿದರು.