ಉಡುಪಿ ಜಿಲ್ಲೆಯ ಬೈಂದೂರಿನ ಒತ್ತಿನೆಣೆಯಲ್ಲಿ ಕಾರು ಸಹಿತ ವ್ಯಕ್ತಿಯನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ನಾಲ್ವರು ಆರೋಪಿಗಳಿಗೆ ಆ. 16 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕುಂದಾಪುರ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರಿನ ಒತ್ತಿನೆಣೆಯಲ್ಲಿ ಕಾರು ಸಹಿತ ವ್ಯಕ್ತಿಯನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ನಾಲ್ವರು ಆರೋಪಿಗಳಿಗೆ ಆ. 16 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕುಂದಾಪುರ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.
ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಕಾರ್ಕಳ ಮೂಲದ ಆನಂದ ದೇವಾಡಿಗ ಎಂಬುವವರನ್ನು ಸುಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಏನಿದು ಘಟನೆ ?
ಬೈಂದೂರು ತಾಲ್ಲೂಕಿನ ಹೇನಬೇರು ಸಮೀಪದ ಅರಣ್ಯ ಇಲಾಖೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಆನಂದ ದೇವಾಡಿಗ ಎಂಬುವರನ್ನು ಕಾರಿನಲ್ಲಿ ಆರೋಪಿಗಳು ಸಜೀವವಾಗಿ ಸುಟ್ಟುಹಾಕಿದ್ದರು.
ಮಲೆಯಾಳಂನ ಕುರುಪ್ ಸಿನಿಮಾದ ಅಪರಾಧ ಕೃತ್ಯಗಳಿಂದ ಪ್ರೇರೇಪಣೆಗೊಂಡು ಆನಂದ ದೇವಾಡಿಗ ಕೊಲೆಗೆ ಪ್ರಮುಖ ಆರೋಪಿ ಸದಾನಂದ ಶೇರೆಗಾರ್ ಸಂಚು ರೂಪಿಸಿದ್ದ.
ಕುರುಪ್ ಸಿನಿಮಾದಲ್ಲಿ ಪಾತ್ರಧಾರಿಯೊಬ್ಬ ವಿಮೆಯ ಹಣ ಪಡೆಯಲು ತನ್ನನ್ನೇ ಹೋಲುವ ವ್ಯಕ್ತಿಯನ್ನು ಹುಡುಕಿ ಕಾರಿನಲ್ಲಿ ಸುಟ್ಟುಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಿ ವಿಮೆ ಹಣ ಪಡೆದುಕೊಂಡಿರುತ್ತಾನೆ.
ಅದೇ ಮಾದರಿಯಲ್ಲಿ ಸದಾನಂದ ಶೇರೆಗಾರ್ ಕೂಡ ತನ್ನ ವಯಸ್ಸಿನ ವ್ಯಕ್ತಿಯನ್ನು ಹುಡುಕಿ ಕಾರಿನಲ್ಲಿ ಸುಟ್ಟುಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಲು ಯತ್ನಿಸಿದ್ದ.
ಕುರುಪ್ ಸಿನಿಮಾದಲ್ಲಿ ವಿಮೆಯ ಹಣ ಪಡೆಯಲು ಕೊಲೆ ನಡೆದರೆ, ಸದಾನಂದ ಶೇರೆಗಾರ್ 2019ರಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಕೊಲೆಗೆ ಸಂಚು ರೂಪಿಸಿದ್ದ .
ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ಭೀತಿಯಲ್ಲಿದ್ದ ಸದಾನಂದ ಶೇರೆಗಾರ್ ತನ್ನ ಸಹೋದರ, ಬಾಮೈದುನರು ಹಾಗೂ ಆಪ್ತೆ ಶಿಲ್ಪಾ ಬಳಿ ದುಃಖ ತೋಡಿಕೊಂಡಿದ್ದ.
ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ನೆರವು ನೀಡುವಂತೆ ಅಂಗಲಾಚಿದ್ದ.
ಕುರುಪ್ ಸಿನಿಮಾದಲ್ಲಿ ಬರುವ ಅಪರಾಧ ದೃಶ್ಯದಂತೆ ತನ್ನನ್ನು ಹೋಲುವ ಹಾಗೂ ಸಮಾನ ವಯಸ್ಸಿನ ವ್ಯಕ್ತಿಯನ್ನು ಹುಡುಕುವಂತೆ ನೆರವು ಕೇಳಿದ್ದ.
ಅದರಂತೆ, ಶಿಲ್ಪಾಗೆ ಪರಿಚಿತನಾಗಿದ್ದ ಕಾರ್ಕಳದಲ್ಲಿ ಗಾರೆ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗ ಎಂಬ ವ್ಯಕ್ತಿಯನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು.
ಜುಲೈ 12ರಂದು ಆನಂದ ದೇವಾಡಿಗರನ್ನು ಮನೆಗೆ ಕರೆಸಿಕೊಂಡು ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕಂಠಪೂರ್ತಿ ಕುಡಿಸಿ ನಿದ್ರೆಗೆ ಜಾರಿದ ಬಳಿಕ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಬೈಂದೂರಿನ ಯೇನಬೇರು ಸಮೀಪದ ನಿರ್ಜನ ಪ್ರದೇಶಕ್ಕೆ ಕರೆತರಲಾಗಿತ್ತು.
ಮಧ್ಯರಾತ್ರಿಯಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ಆನಂದ ದೇವಾಡಿಗ ಅವರನ್ನು ದಹನ ಮಾಡಲಾಗಿತ್ತು.ಕೃತ್ಯದ ಬಳಿಕ ಸದಾನಂದ ಶೇರಿಗಾರ್ ಶಿಲ್ಪಾ ಜತೆ ಬೆಂಗಳೂರು ಬಸ್ ಹತ್ತಿದ್ದ.
ಮಾರ್ಗ ಮಧ್ಯೆ ಮನಸ್ಸು ಬದಲಾಯಿಸಿ ಹಾಸನ ಬಸ್ ನಿಲ್ದಾಣದಲ್ಲಿಯೇ ಇಳಿದು, ಮೂಡುಬಿದರೆ ಬಸ್ ಹತ್ತಿದ್ದ.
ಮೂಡುಬಿದರೆಯಿಂದ ಕಾರ್ಕಳಕ್ಕೆ ಬಂದು ಇಳಿಯುತ್ತಿದ್ದಂತೆ ಇಬ್ಬರನ್ನು ಬಂಧಿಸಿದ್ದರು. ಬಳಿಕ ಉಳಿದ ಆರೋಪಿಗಳನ್ನು ಪೊಲೀಸರ ಬಂಧಿಸಿದ್ದರು.