ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಸಮೀಪ ಬಸ್ ಇಳಿಯುವಾಗ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ಯುವತಿ ರಕ್ಷಿತಾ ಅವರು ಸಾವಲ್ಲೂ ಸಾರ್ಥಕತೆ ಮೆರೆದು 9 ಜನರ ಬಾಳಿಗೆ ಬೆಳಕಾಗಿದ್ದಾಳೆ.
ರಕ್ಷಿತಾಳ(17) ಅಂಗಾಂಗಗಳನ್ನು ತೆಗೆದು, ಅಗತ್ಯ ಇದ್ದವರಿಗೆ ಜೋಡಣೆಗೆ ರವಾನಿಸಲಾಗಿದೆ. ಪುತ್ರಿಯ ಸಾವಿನಿಂದಾಗಿ ತೀವ್ರ ದುಃಖವಾಗಿದೆ. ಅಂಗಾಂಗ ದಾನ ಮೂಲಕ ಸ್ವಲ್ಪ ಸಾರ್ಥಕತೆ ಭಾವ ಮೂಡಿದೆ ಎಂದು ರಕ್ಷಿತಾ ತಾಯಿ ಲಕ್ಷ್ಮಿಬಾಯಿ ಪ್ರತಿಕ್ರಿಯಿಸಿದ್ದಾರೆ.
ರಕ್ಷಿತಾ ಅವರ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಪ್ರಕ್ರಿಯೆ ನಡೆಸಲಾಯಿತು. ತಜ್ಞರ ತಂಡವು ಬೆಳಿಗ್ಗೆ 8 ರಿಂದ ಮಧ್ಯಾಹ್ನದ 1 ಗಂಟೆವರೆಗೆ ಅಂಗಾಂಗಗಳನ್ನು ತೆಗೆಯುವ ಪ್ರಕ್ರಿಯೆ ನಡೆಸಿತು.
ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಒಯ್ಯಲಾಯಿತು. ಯಕೃತ್ತನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಲಾಯಿತು.
ಆಂಬುಲೆನ್ಸ್ ಸಂಚಾರಕ್ಕೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಣ್ಣುಗಳನ್ನು ಕೂಡ ದಾನಮಾಡಲಾಗಿದೆ.
ಅಂಗಾಂಗ ತೆಗೆದ ಬಳಿಕ ರಕ್ಷಿತಾಳ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಯುವತಿ ಓದುತ್ತಿದ್ದ ನಗರದ ಬಸವನಹಳ್ಳಿಯ ಪಿಯು ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಸಾರ್ವಜನಿಕರು, ವಿದ್ಯಾರ್ಥಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ರಕ್ಷಿತಾ ಅವರು ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದವರು.
ಶೇಖರ್ ನಾಯಕ್ ಮತ್ತು ಲಕ್ಷ್ಮಿ ಬಾಯಿ ದಂಪತಿ ಪುತ್ರಿ. ನಗರ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಇದೇ 18ರಂದು ಎಐಟಿ ವೃತ್ತದ ಸಮೀಪದಲ್ಲಿ ಬಸ್‌ನಿಂದ ಇಳಿಯುವಾಗ ಅಪಘಾತ ಸಂಭವಿಸಿತ್ತು. ಅವರು ತೀವ್ರವಾಗಿ ಗಾಯಗೊಂಡಿದ್ದರು.
ಬೆಂಗಳೂರು: ಕರ್ನಾಟಕದಲ್ಲಿ ಎಚ್‌ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ ಆಸ್ಪತ್ರೆಗೆ ಹೋಗುವವರಿಗೆ ಸೂಚನೆ ನೀಡಿದೆ. ಜತೆಗೆ, ಖಾಸಗಿ ಲ್ಯಾಬ್ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಇಲಾಖೆ ನಿಗಾ ಇಡುವುದಾಗಿ ತಿಳಿಸಿದೆ. ಎಚ್‌ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳಿ ಎನ್ನುವವರ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದೆ. ಜ್ವರ, ಕೆಮ್ಮು ಎಂದು ಆಸ್ಪತ್ರೆಗೆ ಹೋಗುವವರು ಎಚ್‌ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.
ಈ ವಿಚಾರವಾಗಿ ಇಂದು (ಬುಧವಾರ) ಸಂಜೆಯೊಳಗೆ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎಚ್‌ಎಂಪಿವಿ ವೈರಸ್ ಟೆಸ್ಟ್ಗೆ 10 ಸಾವಿರದಿಂದ 12 ಸಾವಿರ ರೂ!
ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌ಎಂಪಿವಿ ವೈರಸ್ ಟೆಸ್ಟ್ಗೆ 10 ಸಾವಿರ ರೂ.ನಿಂದ 12 ಸಾವಿರ ರೂ. ದರ ಇದೆ. ಹೀಗಾಗಿ ಟೆಸ್ಟಿಂಗ್ ಅಗತ್ಯ ಇಲ್ಲ ಎಂದು ಇಲಾಖೆ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ಹೇಳಿವೆ.
ಅಪಾಯಕಾರಿ ವೈರಸ್ ಅಲ್ಲ: ಆರೋಗ್ಯ ಇಲಾಖೆ
ಸಾಮಾನ್ಯವಾಗಿ ಚಳಿಗಾಲದಲ್ಲಿ ವೈರಸ್ ಕಾಣಿಸಿಕೊಳ್ಳುವುದು ಸಹಜ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಎಚ್‌ಎಂಪಿವಿ ಟೆಸ್ಟಿಂಗ್ ಮಾಡುವುದಿಲ್ಲ. ಈ ವೈರಸ್ ಅಪಾಯಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಪತ್ತೆಯಾಗಿರುವುದು ಚೀನಾದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ವೈರಸ್ ಅಲ್ಲ ಎಂದು ಈಗಾಗಲೇ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿದ್ದು, ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಈಗಾಗಲೇ ವೈರಸ್ ಪತ್ತೆಯಾಗಿದೆ. ಅದಕ್ಕೂ ಮುನ್ನ ಶಿವಮೊಗ್ಗದಲ್ಲಿ ವೈರಸ್ ಪತ್ತೆಯಾಗಿರುವ ಬಗ್ಗೆ ನಂತರ ಬೆಳಕಿಗೆ ಬಂದಿತ್ತು. ಆದರೆ, ಈ ಎಲ್ಲ ವೈರಸ್ ಸೋಂಕು ಪ್ರಕರಣಗಳಲ್ಲಿ ಸೋಂಕಿಗೆ ಒಳಗಾದ ಮಕ್ಕಳು ಸದ್ಯ ಆರೋಗ್ಯವಾಗಿದ್ದಾರೆ.
ದೇಶದಾದ್ಯಂತ ಈವರೆಗೆ ಒಟ್ಟು 7 ಹೆಚ್ಎಂಪಿವಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ 2, ತಮಿಳುನಾಡಿನಲ್ಲಿ 2, ಮಹಾರಾಷ್ಟ್ರದಲ್ಲಿ 2, ಗುಜರಾತ್ನಲ್ಲಿ 1 ಪ್ರಕರಣ ದೃಢಪಟ್ಟಿವೆ.
ಎಚ್‌ಎಂಪಿವಿ ವೈರಸ್ ಬಗ್ಗೆ ಭಯ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯವನ್ನ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮಂಗಳವಾರ ಲೋಕಾರ್ಪಣೆ ಮಾಡಿದರು.
ಪತ್ನಿ ಸಮೇತರಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಧನ್‌ಕರ್, ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಕಾಂಪ್ಲೆಕ್ಸ್ ಉದ್ಘಾಟಿಸಿ ಅಮೃತವರ್ಷಿಣಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ವೇದಿಕೆಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪತ್ನಿ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪರಾಷ್ಟ್ರಪತಿ ಕ್ಷೇತ್ರ ಕೆಲಸ ಕಾರ್ಯಗಳನ್ನ ಪ್ರಶಂಸಿಸಿ, ಇನ್ನಷ್ಟು ಒಳ್ಳೆ ಕಾರ್ಯ ನಡೆಯಲಿ ಎಂದು ಹಾರೈಸಿದರು.
ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದಾರೆ. ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ಭಕ್ತರು ನಿಲ್ಲುವುದಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು, ಸಮಾನತೆಯನ್ನು ತೋರಿಸುತ್ತದೆ. ಧಾರ್ಮಿಕ ಸಂಸ್ಥೆಗಳು ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿವೆ. ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿ. ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ ಎಂದು ತಿಳಿಸಿದರು.
ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು. ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. ಮೆಸಪೊಟೆಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ‍್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ‍್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದರು.
ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ, ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ. ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ? ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ, ಅತ್ಯುನ್ನತ ನಾಗರಿಕತೆ ನಮ್ಮದು. ದೇಶದಲ್ಲಿ ಸಮಗ್ರತೆ, ವೈವಿಧ್ಯತೆ, ಸೌಹಾರ್ದವನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಹುಟ್ಟಬೇಕಾಗಿದೆ. ಸಾಮಾಜಿಕ ಸದ್ಭಾವ ಎಲ್ಲಿಂದ ಬರಬೇಕು, ಭಾರತ ಮಾತೆ ಒಂದೇ ಎಂದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ, ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಹೇಳಿದರು.
ಪುತ್ತೂರು : ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ಮಹಿಳೆಯ ಜತೆ ಕಾಮುಕ ಪುರುಷನೊಬ್ಬ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜ ಎಂಬಲ್ಲಿ ನಡೆದಿದೆ.
ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಬಶೀರ್ ಎಂದು ತಿಳಿದು ಬಂದಿದೆ. ಕಾಮುಕ ಬಶೀರ್ ಮೊದಲಿಗೆ ಮಹಿಳೆಗೆ ಡ್ಯಾಶ್ ಹೊಡೆದಿದ್ದಾನೆ. ಬಳಿಕ ಆಕೆಯನ್ನು ಮನೆ ತನಕ ಹಿಂಬಾಲಿಸಿ, ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಆಗಮಿಸಿ, ಕಾಮುಕ ಬಶೀರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಬಶೀರ್ ಈ ಮೊದಲು ಕೂಡಾ ಇದೇ ದಾರಿಯಲ್ಲಿ ಹೋಗುವ ಮತ್ತು ಬರುವ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಮಾಹಿತಿ ಇದೆ.