ಮಂಗಳೂರು: ಕಳೆದ 50 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರುವ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ- ಮಾಲಕರ ಸಂಘದ ಸದಸ್ಯರು ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಿಕೊಂಡು ಬಂದಿದ್ದಾರೆ. ಈ ನಡುವೆ ಕೊರೊನಾ ಮಹಾಮಾರಿಯಿಂದ ಸಂಘದ ಸದಸ್ಯರು ಬಾಡಿಗೆ ಇಲ್ಲದೇ ಕಂಗೆಟ್ಟಿದ್ದಾರೆ.
ಇಂತಹ ಸಂದರ್ಭದಲ್ಲಿ ಸರಕಾರ ನಮಗೆ ಸಹಾಯ ಮಾಡುವುದು ಬಿಟ್ಟು ಗದಾ ಪ್ರಹಾರ ನಡೆಸುತ್ತಿದೆ. ಇದನ್ನು ಖಂಡಿಸಿ ನವೆಂಬರ್ 15ರಂದು ಆರ್ಟಿಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ ಎಂದು ದಕ್ಷಿಣ ಕನ್ನಡ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ಸಂಘದ ಅಧ್ಯಕ್ಷ ದಿನೇಶ್ ಕುಂಪಲ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ನಮ್ಮ ಸಂಘದ ಸದಸ್ಯರು ನವರಾತ್ರಿ, ದಸರ ಸಹಿತ ಇತರ ಹಬ್ಬಗಳ ಸಂದರ್ಭದಲ್ಲಿ ಉತ್ತಮ ಬಾಡಿಗೆ ಸಿಗುತ್ತಿತ್ತು.
ಆದರೆ ಈ ಬಾರಿ ಕೆಎಸ್ಸಾರ್ಟಿಸಿ ನಿಗಮವು ತನಗೆ ಇಷ್ಟಬಂದಂತೆ ಪ್ಯಾಕೇಜ್ ಮಾದರಿಯಲ್ಲಿ ಪ್ರವಾಸವನ್ನು ಏರ್ಪಡಿಸಿ ಸದಸ್ಯರಿಗೆ ಬಾಡಿಗೆ ಇಲ್ಲದೇ ಹೊಟ್ಟೆಗೆ ಹೊಡೆದಿದೆ.
ಅಲ್ಲದೆ ಮುಂದಿನ ಕ್ರಿಸ್ಮಸ್ ದಿನಗಳಲ್ಲಿ ಪ್ಯಾಕೇಜ್ ಪ್ರವಾಸ ಏರ್ಪಡಿಸಿದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.
ಅಲ್ಲದೆ ಎರಡೂ ಬದಿಗಳಲ್ಲಿ ಹಳದಿ ಸ್ಟಿಕ್ಕರ್ ಅಳವಡಿಸುವುದು, ಟೋಲ್ಗೇಟ್ನಲ್ಲಿ ದುಬಾರಿ ದರ ವಸೂಲಿ, ಪೊಲೀಶರು ಕ್ಯಾಬ್ ವಾಹನಗಳನ್ನು ನಿಲ್ಲಿಸಿಕೊಂಡು ಚಾಲಕರಿಗೆ ನೀಡುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠೀಯಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ ಕೆ, ಉಪಾಧ್ಯಕ್ಷರಾದ ದಿನೇಶ್ ಮಂಗಳಾದೇವಿ, ಕಾರ್ಯದರ್ಶಿ ಕರುಣಾಕರ ಕುಂಟಿಕಾನ ಮೊದಲಾದವರಿದ್ದರು.