ಮಂಗಳೂರು : ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ 9 ದೋಣಿಗಳನ್ನು ವಶಪಡಿಸಿದ್ದಾರೆ.
ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಂಬ್ಲಮೊಗರು ಸಮೀಪ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸ್ಥಳದಲ್ಲಿದ್ದ ಸುಮಾರು 13.5 ಲಕ್ಷ ರೂಪಾಯಿ ಮೌಲ್ಯದ 9 ಬೋಟು, 2 ಯಂತ್ರ, 3 ಗ್ಯಾಸ್ ಸಿಲಿಂಡರ್, 13 ಪ್ಲಾಸ್ಟಿಕ್ ಬಕೆಟ್ ಗಳನ್ನು ವಶಪಡಿಸಲಾಯಿತು.
ಬಂಟ್ವಾಳ: ಇಡಿ ಅಧಿಕಾರಿಗಳ ಸೋಗಿನಲ್ಲಿ ಹಣ ದರೋಡೆಯಾಗಿರುವ ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ಸ್ಪೀಕರ್ ಯು.ಟಿ. ಖಾದರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಂಡ ಬುಧವಾರ ಬೆಳಗ್ಗೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಕಾರ್ಯವಿಧಾನದ ಕುರಿತು ಮನೆಯವರ ಜೊತೆಗೆ ಗೌಪ್ಯ ಸಮಾಲೋಚನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, ತನಿಖೆ ಇನ್ನಷ್ಟು ತೀವ್ರಗೊಳಿಸಲು ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಇದಕ್ಕೆ ಊರವರ ಮತ್ತು ಮನೆಯವರ ಸಹಕಾರ ಅಗತ್ಯ. ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ದರೋಡೆಕೋರರ ಪತ್ತೆ ಹಚ್ಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಗೌಪ್ಯ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಇ. ನಾಗರಾಜ್, ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ : ತಾಯಿಯೊಬ್ಬಳು ತನ್ನ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾ*ಯಗೊಳಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ನ್ಯಾಯಾಲಯ ಆರೋಪಿಗೆ ಶಿಕ್ಷೆ ಘೋಷಿಸಿದೆ.
ಕಾವ್ಯಶ್ರೀ ಎಂಬುವವರು 2022ರ ಆ.16ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಬಿಸಿ ಹಾಲಿನ ಪಾತ್ರೆಯಿಂದ ತನ್ನ 5 ವರ್ಷ ಪ್ರಾಯದ ಪುತ್ರಿಯ ದೇಹದ ವಿವಿಧ ಕಡೆ ಸು*ಟ್ಟು ನೋವುಂಟು ಮಾಡಿದ್ದರು.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಸುಳ್ಯ ಠಾಣೆಯಲ್ಲಿ ತಾಯಿ ವಿರುದ್ದ ದೂರು ದಾಖಲಿಸಿದ್ದರು.
ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರು ಆಪಾದಿತೆಯನ್ನು ದೋಷಿಯೆಂದು ಘೋಷಿಸಿದ್ದಾರೆ. ಅಪಾದಿತೆಗೆ ಒಟ್ಟು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಕಾರಗೃಹ ವಾಸದ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದಿಸಿದ್ದರು.
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗ ದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನ-2025’ ಕಾರ್ಯಕ್ರಮವು ಬುಧವಾರ ಗಂಜಿಮಠದ ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ನಡೆಯಿತು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಡಾ.ಭರತ್ ಶೆಟ್ಟಿ, ದೀಪಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಯಕ್ಷಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ದೇವದಾಸ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಯಕ್ಷಧ್ರುವ – ಯಕ್ಷಶಿಕ್ಷಣದಲ್ಲಿ ತರಬೇತಿ ಪಡೆದ ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ರಂಗ ಪ್ರವೇಶ ಮಾಡಿದರು. ಬಂಟ್ವಾಳ ಕ್ಷೇತ್ರದ 10 ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ 10 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತ್ಯೇಕ ಪ್ರತ್ಯೇಕವಾದ ಎರಡು ರಂಗಸ್ಥಳದಲ್ಲಿ ತಮ್ಮ ಪ್ರದರ್ಶನ ನೀಡಿದರು.
ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರದ 10 ಶಾಲೆಯ ವಿದ್ಯಾರ್ಥಿಗಳು ಹಾಗೂ ಕೀರ್ತಿಶೇಷ ಡಾ. ವೈ. ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಉತ್ತರ ಕ್ಷೇತ್ರದ 11 ಶಾಲೆಗಳ ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದರು.