ಮಂಗಳೂರು: ದಿನಂಪ್ರತಿ ನೂರಾರು ಹೆರಿಗೆಗಳು ನಡೆಯುವ ನಗರದ ಜಿಲ್ಲಾ ಲೇಡಿಗೋಷನ್ ಆಸ್ಪತ್ರೆಯಲ್ಲಿ ಇಂದು ನೀರು ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆಯಾಗಿ ರೋಗಿಗಳು ಹಾಗೂ ಆರೈಕೆದಾರರು ಪರದಾಡಿದ ಘಟನೆ ನಡೆದಿದೆ. ಕುರಿತು ಮಾಹಿತಿ ಪಡೆದು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಲೇಡಿಗೋಷನ್ ಆಸ್ಪತ್ರೆಯ ಸಂಪಿನಿಂದ ಮೇಲಿನ ಟ್ಯಾಂಕಿಗೆ ನೀರು ಸರಬರಾಜು ಮಾಡಲು 2 ಪಂಪ್ ಅಳವಡಿಸಲಾಗಿತ್ತು. ಅದರಲ್ಲಿ 1 ಪಂಪ್ ಹಾಳಾದ ಹಿನ್ನೆಲೆಯಲ್ಲಿ ಮತ್ತೊಂದು ಪಂಪಿನ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಆದರೆ ಇಂದು ಮುಂಜಾನೆ ಚಾಲನೆಯಲ್ಲಿದ್ದ ಪಂಪ್ ಹಾಳಾಗಿನೀರು ಸರಬರಾಜಿಗೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ಈಗಾಗಲೇ ಹಾಳಾದ ಪಂಪಿನ ರಿಪೇರಿ ಮತ್ತು ಹೊಸದಾದ ಪಂಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇಕಾದ ಸಾಮಾಗ್ರಿಗಳು ದೊರೆಯದೆ ಇರುವುದೂ ಕೂಡ ರಿಪೇರಿ ಮಾಡಲು ವಿಳಂಬವಾಗಿತ್ತು. ಆದರೆ ತಕ್ಷಣವೇ ಹೊಸ ಪಂಪ್ ಅಳವಡಿಸಲಾಗಿದ್ದು ಸಮಸ್ಯೆ ನಿವಾರಣೆಯಾಗಿದೆ. ಈ ವಿಚಾರದಲ್ಲಿ ರಾಜಕೀಯ ಎಳೆದು ತರುವ ಅವಶ್ಯಕತೆ ಇಲ್ಲ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ನೀರು ಸರಬರಾಜು ವ್ಯವಸ್ಥೆಯಲ್ಲಿ ಪಾಲಿಕೆಯಿಂದ ಅಥವ ಆಸ್ಪತ್ರೆಯಿಂದ ಯಾವುದೇ ರೀತಿಯ ಲೋಪವಾಗಿಲ್ಲ. ಪಂಪ್ ಹಾಳಾಗಿರುವ ಹಿನ್ನೆಲೆಯಲ್ಲಿ ನೀರು ಸರಬರಾಜಿಗೆ ತೊಡಕಾಗಿದೆ. ಶಾಸಕ ವೇದವ್ಯಾಸ್ ಕಾಮತ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಆಸ್ಪತ್ರೆಯ ಆಡಳಿತ ವ್ಯವಸ್ಥೆಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದು, ಹೊಸ ಪಂಪ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು. ಇದಕ್ಕೂ ಮುಂಚೆ ಮನಪಾ ಪ್ರತಿಪಕ್ಷ ನಾಯಕ ಎ.ಸಿ ವಿನಯರಾಜ್ ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಸ್ಥಳೀಯ ಕಾರ್ಪೋರೇಟರ್ ಪೂರ್ಣಿಮಾ, ಆಸ್ಪತ್ರೆ ಡಿಎಂಒ ದುರ್ಗಾಪ್ರಸಾದ್, ವೈದ್ಯರು ಹಾಗೂ ಆಸ್ಪತ್ರೆಯ ಪ್ರಮುಖರು ಉಪಸ್ಥಿತರಿದ್ದರು.