ಹೊಸದಿಲ್ಲಿ: ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹಿಂದೂ ಸಂಘಟನೆಯ ಮುಖಂಡರು ಆಗಾಗ ಹೇಳಿಕೆ ನೀಡುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಲಿಖಿತವಾಗಿ ಉತ್ತರ ನೀಡಿದೆ. ಏನಂತ? ಇದೊಂದು ಕಲ್ಪನೆ ಮಾತ್ರ. ಹಿಂದೂಗಳು ಅಪಾಯದಲ್ಲಿ ಇದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಮಹಾರಾಷ್ಟ್ರದ ನಾಗ್ಪುರ ಮೂಲಕ ಆರ್‌ಟಿಐ ಕಾರ್ಯಕರ್ತ ಮೊಹ್ನಿಸ್ ಜಬಲ್‌ಪುರ್ ಎಂಬವರು ‘ದೇಶದಲ್ಲಿ ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದಕ್ಕೆ ಪುರಾವೆ ಕೊಡಿ’ ಎಂದು ಆಗಸ್ಟ್ 31 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಉತ್ತರ ನೀಡಿರುವ ಗೃಹ ಇಲಾಖೆ, ಹಿಂದೂ ಧರ್ಮ ಅಪಾಯದಲ್ಲಿ ಇದೆ ಎನ್ನುವುದು ಕಲ್ಪನೆಯಾಗಿದ್ದು, ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಅಥವಾ ನಿಖರ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಸಿಪಿಐಒ ‘ಮಾಹಿತಿ ಹಕ್ಕು ಕಾಯ್ದೆಯ ನಿಯಮದನ್ವಯ, ಸಾರ್ವಜನಿಕ ಮಾಹಿತಿ ಅಧಿಕಾರಿ ತಮ್ಮ ಪರಿಧಿಗೆ ಬರುವ, ತಮ್ಮ ಬಳಿ ಇರುವ ಮಾಹಿತಿಯನ್ನಷ್ಟೇ ಕೇಳಬಹುದು.
ಯಾವುದೇ ಕಾಲ್ಪನಿಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಹೀಗಾಗಿ ಮೊಹ್ನಿಸ್ ಅವರ ಅರ್ಜಿ ಕಾಲ್ಪನಿಕ ಎಂದು ಪರಿಗಣಿಸಿ ಅದನ್ನು ಅಮಾನ್ಯ ಮಾಡಲಾಗಿದೆ’ ಎಂದಿ ಹೇಳಿದ್ದಾರೆ.
ಉತ್ತರ ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡಿರುವ ಅರ್ಜಿದಾರ ಮೊಹ್ನಿಸ್ ಜಬಲ್‌ಪುರ್, ‘ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದು ಸುಳ್ಳು.
ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಈ ಆರೋಪವನ್ನು ದೃಢೀಕರಿಸುವುದಕ್ಕೆ ಯಾವುದೇ ಪುರಾವೆ ಇಲ್ಲ’ ಎಂದು ಹೇಳಿದ್ದಾರೆ.
‘ಇದಾಗ್ಯೂ ಬಿಜೆಪಿ ಹಾಗೂ ಅದರ ಜತೆ ಗುರುತಿಸಿಕೊಂಡಿರುವವರು, ರಾಜಕೀಯ ಲಾಭಕ್ಕಾಗಿ ಹಿಂದೂಗಳು, ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ ಯಾಕೆ? ಎಂದು ಮೊಹ್ನಿಸ್ ಜಬಲ್‌ಪುರ್ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿಯೂ ಹೇಳಿದ್ದಾರೆ.