ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದರೂ ಮಾಸ್ಕ್ ಧರಿಸಲು ಒಪ್ಪದ ಪ್ರಯಾಣಿಕರನ್ನು ಮುಲಾಜಿಲ್ಲದೇ ವಿಮಾನದಿಂದ ಕೆಳಗಿಳಿಸಬೇಕು ಎಂದು ನಾಗರಿಕ ವಿಮಾನಯಾನ ನಿರ್ದಶನಾಲಯ (ಡಿಜಿಸಿಎ) ಕಟ್ಟುನಿಟ್ಟಿನ ಸೂಚನೆ ನೀಡಿದೆ. ದಿಲ್ಲಿ ಹೈಕೋರ್ಟ್ ನೀಡಿದ ಬೆನ್ನಲ್ಲೇ ಡಿಜಿಸಿಎ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ವಿಮಾನ ಹತ್ತುವ ಮುನ್ನ ಮಾಸ್ಕ್ ಧರಿಸದಿದ್ದರೆ ಅಂತಹ ಪ್ರಯಾಣಿಕರನ್ನು ಕೆಳಗಿಳಿಸಬೇಕು. ಒಂದೊಮ್ಮೆ ಮಾರ್ಗ ಮಧ್ಯೆ ಪದೇ ಪದೇ ಎಚ್ಚರಿಕೆಯನ್ನೂ ಕಡೆಗಣಿಸಿ ಮಾಸ್ಕ್ ತೆಗೆದು ರಾದ್ಧಾಂತ ನಡೆಸಿದರೆ ಅಂತಹ ಪ್ರಯಾಣಿಕರನ್ನು ‘ಅಶಿಸ್ತಿನ ಪ್ರಯಾಣಿಕ’ ಎಂಬ ಪಟ್ಟಿಗೆ ಸೇರಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಡಿಜಿಸಿಎ ತಿಳಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ದಿಲ್ಲಿ ಹೈಕೋರ್ಟ್ ಮಾಸ್ಕ್ ಧರಿಸದ ಪ್ರಯಾಣಿಕರನ್ನೂ ನೋ ಫ್ಲೈ ಲಿಸ್ಟ್‌ಗೆ ಸೇರಿಸಬೇಕು ಎಂದು ಆದೇಶಿಸಿತ್ತು.
ಮಹಾರಾಷ್ಟ್ರದಲ್ಲಿ ಅಧಿಕ ಸೋಂಕು
ಸತತ ಎರಡನೇ ದಿನವೂ ಮಹಾರಾಷ್ಟ್ರದಲ್ಲಿ ಕೊರೋನಾ ಸ್ಫೋಟಗೊಂಡಿದೆ. ನಿನ್ನೆ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ ಕಳೆದ 24 ಗಂಟೆ ಅವಧಿಯಲ್ಲಿ 2701 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ಹೇಳಿದೆ.
ಮುಂಬಯಿಯಲ್ಲಿ 1,765 ಹೊಸ ಕೇಸ್ ದಾಖಲಾಗಿದ್ದು, ರಾಜ್ಯದ ಕೊರೋನಾ ಹಾಟ್ ಸ್ಪಾಟ್ ಎನ್ನಿಸಿಕೊಂಡಿದೆ. ಮಲಾಡ್‌ನಲ್ಲಿ 2,200 ಬೆಡ್‌ಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಕಳೆದೊಂದು ದಿನದಲ್ಲಿ ಭಾರತದಲ್ಲಿ 5233 ಹೊಸ ಕೆಸ್ ದಾಖಲಾಗಿದ್ದು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ದಿಲ್ಲಿ, ಹರಿಯಾಣದಲ್ಲಿ ಗರಿಷ್ಠ ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
‘ವಿಶೇಷ ಸಂದರ್ಭದಲ್ಲಿ ಮಾತ್ರ ಪ್ರಯಾಣಿಕರಿಗೆ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಬಹುದು.
ಸದ್ಯ ದೇಶದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯವಾಗಿದೆ’ ಎಮದು ಡಿಜಿಸಿಎ ಹೇಳಿದೆ.