ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನ ಸಂಸ್ಥೆ ಡಾ. ನಿಟ್ಟೆ ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜು ಹಾಗೂ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಜಾಗತಿಕ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ – 2024 ಡಿಸೆಂಬರ್ 28ರಂದು ಜಸ್ಟೀಸ್ ಕೆ. ಎಸ್. ಹೆಗ್ಡೆ ಉದ್ಯಮಾಡಳಿತ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿದ್ಯಾಸಂಸ್ಥೆಯ ಮಾರ್ಗದರ್ಶಕರು, ಕರ್ನಾಟಕ ವಿಧಾನಪರಿಷತ್ ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಹಾಗೂ ಹಳೆ ವಿದ್ಯಾರ್ಥಿಗಳ ಸಂಘಟನೆಗಳ ನಿರ್ದೇಶಕರಾಗಿರುವ ಶ್ರೀ ಪ್ರಸನ್ನ ಆರ್. ಕೈಲಾಜೆ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪೂರ್ವ ವಿದ್ಯಾರ್ಥಿಗಳು ಕಲಿತ ಸಂಸ್ಥೆಯ ಜೊತೆ ನಿಕಟ ಸಂಬಂಧವಿರಿಸಿಕೊಂಡು ವರ್ಷದಲ್ಲಿ ಕನಿಷ್ಠ ಒಮ್ಮೆಯಾದರೂ ಭೇಟಿ ನೀಡುವ ಜೊತೆಯಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀ ಪ್ರಸನ್ನ ಆರ್. ಕೈಲಾಜೆ ಹಿರಿಯ ವಿದ್ಯಾರ್ಥಿ ಸಂಘಟನೆಯ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 21 ಪೂರ್ವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಹಿಂದೆ ಕಾರ್ಯ ನಿರ್ವಹಿಸಿರುವ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿಶ್ವದೆಲ್ಲೆಡೆ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದ ಬಳಿಕ ಹಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಸ್ನೇಹ ಮಿಲನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಮನೋರಂಜನಾ ಕ್ರೀಡೆಗಳು ನಡೆದವು. ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಾಯಕ ಗ್ರಂಥಪಾಲಕ ಶ್ರೀ ಸತೀಶ್ ಶೆಟ್ಟಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸಭೆಗೆ ಪರಿಚಯಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ನೂತನ ನಿರ್ದೇಶಕ ಡಾ. ಸುಧೀರ್ ಎಂ. ವಂದಿಸಿದರು. ಶ್ರೀಮತಿ ಚೈತ್ರ ಕುಡ್ವ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಚರಿತ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಗೈದರು.
ಉಪನ್ಯಾಸಕರಾದ ಡಾ. ದಯಾನಂದ ಬಾಯಾರ್, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾದ ಶ್ರೀಮತಿ ಅರ್ಚನಾ ಭಟ್ ಹಾಗೂ ಇತರರು ಸಹಕರಿಸಿದರು. ಇದೇ ಸಂದರ್ಭದಲ್ಲಿ 2024-25 ರಿಂದ 2025-26ರ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಶ್ರೀಮತಿ ಚೈತ್ರ ಕುಡ್ವ, ಉಪಾಧ್ಯಕ್ಷರಾಗಿ ಶ್ರೀ ಅಬ್ದುಲ್ ರಜಾಕ್, ಕಾರ್ಯದರ್ಶಿಯಾಗಿ ಶ್ರೀ ಸತೀಶ್ ಶೆಟ್ಟಿ, ಖಜಾಂಚಿಯಾಗಿ ಶ್ರೀಮತಿ ಅರ್ಚನಾ ಭಟ್ ಹಾಗೂ 9 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿ ಆಯ್ಕೆಗೊಂಡರು.
ಪೂರ್ವ ವಿದ್ಯಾರ್ಥಿನಿ ಶ್ರೀಮತಿ ಅನುರಾಧಾ ಭಟ್ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ದರ್ವಿಶ್ ಮಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ವೀಣಾ ಬಿ.ಕೆ ಸ್ವಾಗತಿಸಿದರು.
ಮಂಗಳೂರು/ಮುಂಬೈ : ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ದಾಂಪತ್ಯ ಜೀವನ ಮುರಿದುಬಿತ್ತಾ ಎಂಬ ಅನುಮಾನ ಶುರುವಾಗಿದೆ.
ಕಳೆದ ಕೆಲವು ವರ್ಷಗಳಿಂದಲೂ ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.
ಇದೀಗ ಅಚ್ಚರಿ ಎಂಬಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್ ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಚಹಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಅಳಿಸಿ ಹಾಕಿದ್ದಾರೆ. ಆದರೆ, ಚಹಲ್ ಅವರನ್ನು ಅನ್ ಫಾಲೋ ಮಾಡಿರುವ ಧನಶ್ರೀ ಅವರೊಂದಿಗಿನ ಫೋಟೊಗಳನ್ನು ಈವರೆಗೆ ಅಳಿಸಿ ಹಾಕಿಲ್ಲ.
2023ರಲ್ಲಿ ಧನಶ್ರೀ ಅವರು ಇನ್ ಸ್ಟಾಗ್ರಾಂ ಯುಸರ್ ನೇಮ್ ನಿಂದ ‘ಚಹಲ್’ ಅನ್ನು ಕೈಬಿಟ್ಟ ನಂತರ ವಿಚ್ಛೇದನ ವದಂತಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ಆಗ ಯಜುವೇಂದ್ರ ಚಹಲ್ ನಿರಾಕರಿಸಿದ್ದರು.
ಲಾಕೌಡೌನ್ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು.
ಮಂಗಳೂರು/ಜೈಪುರ : ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ಶಾಂತಿ ಮತ್ತು ಏಕತೆಯ ಸಂದೇಶ ಸಾರುವ ಅಜ್ಮೀರ್ ಷರೀಫ್ ದರ್ಗಾದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ದರ್ಗಾಗೆ ಭೇಟಿ ನೀಡಿ ಚಾದರ್ ಸಮರ್ಪಿಸುವ ಮೂಲಕ ಖ್ವಾಜಾ ಮೊಯಿನುದ್ದೀನ್ ಚಸ್ತಿ ಅವರ 813 ನೇ ಉರೂಸ್ ನಲ್ಲಿ ಭಾಗವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸತತ ಹನ್ನೊಂದು ವರ್ಷಗಳಿಂದ ಅಜ್ಮೀರ್ ಷರೀಫ್ ದರ್ಗಾದ ಉರೂಸ್ ಸಮಯದಲ್ಲಿ ದರ್ಗಾಕ್ಕೆ ಚಾದರ್ ಸಮರ್ಪಣೆ ಮಾಡಿದ್ದಾರೆ. ಈ ಬಾರಿ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿ ಮೋದಿ ಅವರ ಪರವಾಗಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ರಿಜಿಜು, “ಅಜ್ಮೀರ್ ಉರೂಸ್ ಸಮಯದಲ್ಲಿ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡುವುದು ದೇಶದ ಹಳೆಯ ಸಂಪ್ರದಾಯವಾಗಿದೆ. ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶವನ್ನು ರವಾನಿಸಲು ಪ್ರಧಾನಿ ಮೋದಿ ಅವರ ಪರವಾಗಿ ಚಾದರ್ ಅರ್ಪಿಸುವ ಅವಕಾಶ ಸಿಕ್ಕಿದೆ. ಉರೂಸ್ ಸಂದರ್ಭದಲ್ಲಿ ದೇಶದಲ್ಲಿ ಶಾಂತಿಯುತ ವಾತಾವರಣಕ್ಕಾಗಿ ನಾವು ಆಶೀರ್ವಾದವನ್ನು ಬಯಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದೇ ವೇಳೆ ದರ್ಗಾಕ್ಕೆ ಭೇಟಿ ನೀಡುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಅನುಕೂಲ ಆಗುವ ಎಲ್ಲಾ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು/ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಿಪೋರಾದ ವುಲರ್ ವ್ಯೂಪಾಯಿಂಟ್ ಬಳಿ ಸೇನಾ ವಾಹನವೊಂದು ರಸ್ತೆಯಿಂದ ಕೆಳಗಿಳಿದು ಆಳವಾದ ಕಮರಿಗೆ ಉರುಳಿದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಉತ್ತರ ಕಾಶ್ಮೀರ ಜಿಲ್ಲೆಯ ಎಸ್.ಕೆ ಪಯೆನ್ ಬಳಿ ಸೇನಾ ವಾಹನ ಕಮರಿಗೆ ಬಿದ್ದು ಇಬ್ಬರು ಸೈನಿಕರ ಸಾವು, ಮೂವರು ಗಂಭೀರವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬಂಡಿಪೋರಾ- ಶ್ರೀನಗರ ರಸ್ತೆಯ ಎಸ್ ಕೆ ಪಯೀನ್ ಬಳಿ ವಾಹನ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಬಂಡಿಪೋರಾಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಇಬ್ಬರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ತೀವ್ರವಾಗಿ ಗಾಯಗೊಂಡ ಮೂವರು ಸೈನಿಕರನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ.