ಮಂಗಳೂರು: ಪ್ರವೀಣ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಒಪ್ಪಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಇದೇ ವೇಳೆ ರಾಜ್ಯಕ್ಕೆ ಎನ್‌ಐಎ ಕೇಂದ್ರ ಮಂಜೂರು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.
ಕೇಂದ್ರ ಸರ್ಕಾರ ಈ ಬೇಡಿಕೆಗೆ ಸಮ್ಮತಿಸಿದಲ್ಲಿ ರಾಜ್ಯದ ಮೊದಲ ಎನ್‌ಐಎ ಕೇಂದ್ರ ಕರಾವಳಿ ನಗರ ಮಂಗಳೂರಿನಲ್ಲಿಯೇ ಸ್ಥಾಪನೆಯಾಗಲಿದೆ. ಕರ್ನಾಟಕಕ್ಕೆ ರಾಷ್ಟ್ರೀಯ ತನಿಖಾ ದಳದ ಕೇಂದ್ರ ಅಗತ್ಯವಿದೆ.
ಅದರಲ್ಲೂ ಮಂಗಳೂರಿಗೆ ಇದರ ಅನಿವಾರ್ಯತೆ ಹೆಚ್ಚೇ ಇದೆ ಎಂದು ಜುಲೈ 28ರಂದು ಪ್ರವೀಣ್ ಮನೆಗೆ ಭೇಟಿ ನೀಡಿದ ಸಂದರ್ಭ ರಾಜ್ಯದ ಸಿಎಂ ಬೊಮ್ಮಾಯಿ ಹೇಳಿದ್ದರು.
ಜುಲೈ 29ರಂದು ಪ್ರವೀಣ್ ಹತ್ಯೆಯನ್ನು ಎನ್‌ಐಗೆ ಹಸ್ತಾಂತರಿಸಲು ನಿರ್ಧರಿಸುವುದನ್ನು ಅವರು ಬೆಂಗಳೂರಿನಲ್ಲಿ ಪ್ರಕಟಿಸಿದ್ದರು. ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ರಾಜ್ಯಕ್ಕೆ ಎನ್‌ಐಎ ಕೇಂದ್ರವನ್ನು ಕೇಂದ್ರ ಸರ್ಕಾರ ಮಂಜೂರು ಮಾಡುವ ಭರವಸೆ ಇದೆ. ಮಂಜೂರಾದಲ್ಲಿ ಅದು ಮಂಗಳೂರಿನಲ್ಲಿಯೇ ಸ್ಥಾಪನೆಯಾಗಲಿದೆ.
ಈಗಾಗಲೇ ಮಂಗಳೂರಿನಲ್ಲಿ ಜಮೀನು ವೀಕ್ಷಣೆ ಕೂಡಾ ಮಾಡಲಾಗಿದೆ ಎಂದು ಹೇಳಿದರು.
ಸೋಮವಾರ ಮತ್ತು ಮಂಗಳವಾರ ಕರ್ನಾಟಕ ಬಿಜೆಪಿ ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಕುರಿತು ರಾಜ್ಯದ ಬೇಡಿಕೆಯನ್ನು ಪುನರುಚ್ಛರಿಸಲಿದ್ದೇವೆ. ನಮ್ಮ ಬೇಡಿಕೆ ಈಡೇರುವ ನಿರೀಕ್ಷೆ ಇದೆ ಎಂದರು.
ರಾಜ್ಯದ ಪಶ್ಚಿಮ ಕರಾವಳಿ ಸುಮಾರು 300 ಕಿ.ಮೀ ಉದ್ದವಿದ್ದು, ದೇಶದ ಪಾಲಿಗೆ ಅತ್ಯಂತ ಪ್ರಮುಖ ಪ್ರದೇಶ ಇದಾಗಿದೆ. ಕಾರವಾರ ಬಂದರು, ಮಂಗಳೂರು ಬಂದರು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಧಾನ ಬಿಂದುಗಳಾಗಿವೆ.
ಮುಂಬಯಿ ಮತ್ತು ಮಂಗಳೂರಿಗೆ ಇರುವ ಸಂಪರ್ಕ, ಕೇರಳದೊಂದಿಗೆ ಬೆಸೆದುಕೊಂಡಿರುವ ಗಡಿ, ಕೊಲ್ಲಿ ರಾಷ್ಟ್ರಗಳೊಂದಿಗಿರುವ ನೇರ ಸಂಬಂಧ ಮತ್ತು ಈ ಎಲ್ಲ ಕಾರಣಗಳಿಂದಾಗಿಯೇ ಸಮಾಜ ಘಾತುಕ ಶಕ್ತಿಗಳು ಮಂಗಳೂರು ಸಹಿತ ಕರಾವಳಿಯನ್ನು ಯಥೇಚ್ಚವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿಯನ್ನು ಮಂಗಳೂರು ಕೇಂದ್ರಿತವಾಗಿ ಸ್ಥಾಪಿಸಬೇಕೆಂಬ ಬೇಡಿಕೆ ಕಳೆದ ಹತ್ತು ವರ್ಷಗಳಿಂದ ಇದೆ.