ದುಬೈ: ಯುಎಇ ದೇಶದಲ್ಲಿರುವ ಕರ್ನಾಟಕದ ಎಲ್ಲಾ ಸಂಘಟನೆಗಳು ಪರಸ್ಪರ ಸಹಕಾರ ಮತ್ತು ಸಮನ್ವಯತೆಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸ ಬೇಕೆಂದು ಯು.ಎ. ಇ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ ತೀರ್ಮಾನಿಸಿದೆ.
ಯು.ಎ. ಇ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ರವಿವಾರ ವಿವಿಧ ಕನ್ನಡ ಸಂಘನೆಗಳು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿವೆ.
ಕನ್ನಡ ಸಂಘಟನೆಗಳು ಒಂದೇ ದಿನ ಮತ್ತು ಒಂದೇ ಸಮಯದಲ್ಲಿ ಕಾರ್ಯಕ್ರಮ ನಡೆಸುವುದರಿಂದ ಭಾಗವಹಿಸುವ ಕನ್ನಡಿಗರಿಗೆ ಅನಾನುಕೂಲ ಉಂಟಾಗುವುದಲ್ಲದೆ ವೀಕ್ಷಕರನ್ನು ವಿಭಜಿಸಿದಂತಾಗುತ್ತದೆ.
ಕೆಲವರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಿ ಯಾವ ಕಾರ್ಯಕ್ರಮದಲ್ಲಿಯೂ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಅಲ್ಲದೆ ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ಬೆರಳೆಣಿಕೆಯ ವೀಕ್ಷಕರನಿಟ್ಟುಕೊಂಡು ಕಾರ್ಯಕ್ರಮ ನಡೆಸುವುದರಿಂದ ಅದು ಯು.ಎ. ಇ ಯಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳ ವಿಶ್ವಾಸಾರ್ಹತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ದುಬಾಯಿ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರು ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಮತ್ತು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.