‘ರಾಷ್ಟ್ರೀಯ ಹೆಣ್ಣುಮಕ್ಕಳ ದಿನ’ ದ ಅಂಗವಾಗಿ ಇಂದು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣುಶಿಶುಗಳಿಗೆ ವಿಶೇಷ ಉಡುಗೊರೆ ನೀಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಸಾವಿರ ರೂ. ಬೆಲೆಯ ಮಕ್ಕಳ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಆರೋಗ್ಯ ಇಲಾಖೆಯು ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.
ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಾಮಾನತೆ ಮತ್ತು ಲಿಂಗ ತಾರತಮ್ಯತೆಯ ನಿವಾರಣೆಗಾಗಿ ಹೆಣ್ಣುಮಗುವಿನ ಹಕ್ಕುಗಳ ಜಾಗೃತಿ, ಸ್ತ್ರೀ ಶಿಕ್ಷಣದ ಮಹತ್ವ, ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತಾಗಿ ಜಾಗೃತಿ ಹಾಗೂ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ಮೂಲ ಆಶಯದೊಂದಿಗೆ 2008 ರಿಂದ ಭಾರತದಲ್ಲಿ ‘ರಾಷ್ಟ್ರೀಯ ಹೆಣ್ಣುಮಕ್ಕಳ ದಿನ’ ವನ್ನು ಇಂದು (ಜ.24) ಆಚರಿಸಲಾಗುತ್ತಿದೆ. ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು 1966ರಲ್ಲಿ ಅಧಿಕಾರ ವಹಿಸಿಕೊಂಡ ದಿನವೂ ಇದಾಗಿರುವುದು ವಿಶೇಷ.
ಹೆಣ್ಣು ಮಗು ಇರುವ ಮನೆಯಲ್ಲಿ ಧನಾತ್ಮಕ ಶಕ್ತಿ ಇದ್ದೇ ಇರುತ್ತದೆ. ತಾನಿರುವಲ್ಲೆಲ್ಲ ನಗುವಿರಲಿ, ಮಾತಿನ ಸೌಹಾರ್ದತೆಯಿರಲಿ, ಒಪ್ಪ ಓರಣವಾಗಿರಲಿ ಎನ್ನುವ ಸದಭಿರುಚಿಯನ್ನು ನೈಸರ್ಗಿಕವಾಗಿಯೇ ಪಡೆದುಕೊಂಡು ಬಂದ ಹೆಣ್ಣು ಮಗು ಈ ಪ್ರಕೃತಿಯ ಅತ್ಯಂತ ಸುಂದರ ಸೃಷ್ಟಿ. ಇಂತಹ ಸೃಷ್ಟಿಯೊಂದು ಇಂದು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಾ ಇದೆ ಎಂದರೆ ಅದಕ್ಕೆ ಹಲವಾರು ವರ್ಷಗಳ ಸಂಘರ್ಷವೇ ಕಾರಣ. ಪ್ರಸ್ತುತ ನಮ್ಮ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರೆ ಸಾಕು ಆಕೆಗಿರುವ ಶಕ್ತಿ ಹಾಗೂ ಯುಕ್ತಿಯ ಅರಿವಾಗುತ್ತದೆ.
ಆರೋಗ್ಯ ಇಲಾಖೆಯು ಜ. 24ರಂದು ರಾಜ್ಯದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಯನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ. ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವು ದರ ಜತೆಗೆ ಹೆಣ್ಣುಭ್ರೂಣ ಹತ್ಯೆಯನ್ನು ಹೋಗ ಲಾಡಿಸಲು ಹಲವು ಕಾರ್ಯಕ್ರಮಗಳನ್ನು ಹಾಕಿ ಕೊಂಡಿದೆ. ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾತನಾಡಿ, ಹೆಣ್ಣುಮಗು ಎದುರಿಸುತ್ತಿರುವ ಎಲ್ಲ ಅಸಮಾನತೆಗಳ ಬಗ್ಗೆ ದಿನಾಚರಣೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡಬೇಕು. ಲಿಂಗ ಪತ್ತೆ ಮತ್ತು ಗರ್ಭಪಾತ ನಡೆಸುವ ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮತ್ತು ಹೆಣ್ಣು ಮಗುವಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.